ಭದ್ರಾವತಿ : 2023 ಕ್ಕೆ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜ್ಯ ಪ್ರವಾಸ ಮಾಡುತ್ತಿರುವ ಜೆಡಿಎಸ್ ದಳಪತಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಲೆನಾಡು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.
ಶಿವರಾತ್ರಿ ಹಬ್ಬದ ಹಿನ್ನೆಲೆ ಪಂಚರತ್ನ ರಥಯಾತ್ರೆಗೆ ಬ್ರೇಕ್ ನೀಡಿದ್ದ ಮಾಜಿ ಸಿಎಂ ಹೆಚ್ಡಿಕೆ, ಶಿವಮೊಗ್ಗದಲ್ಲಿ ಯಾತ್ರೆ ಪುನಾರಂಭ ಮಾಡಿದ್ದು, ಜೆಡಿಎಸ್ ಕಾರ್ಯಕರ್ತರು ವಿಭಿನ್ನ ಹಾರ, ಬೈಕ್ ರ್ಯಾಲಿ ಜೊತೆಗೆ ಅಭೂತಪೂರ್ವ ಸ್ವಾಗತ ಕೋರುವ ಮೂಲಕ ಮೊದಲ ದಿನದ ಪಂಚರತ್ನ ಯಾತ್ರೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ.
ಹೌದು, ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ಮಲೆನಾಡು ಶಿವಮೊಗ್ಗದಲ್ಲಿ ಇಂದು ಅಭೂತಪೂರ್ವ ಸ್ವಾಗತ ದೊರೆಕಿದೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಬೆಳಿಗ್ಗೆ ಭದ್ರಾವತಿ ತಾಲೂಕಿನ ಕಾರೆಹಳ್ಳಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ವಿವಿಧ ಬಗೆಯ ಹಾರಗಳನ್ನು ಹಾಕುವ ಮೂಲಕ ನೆಚ್ಚಿನ ನಾಯಕನಿಗೆ ಸ್ವಾಗತ ಕೋರಿದ್ದಾರೆ.
ಭದ್ರಾವತಿ ವಿಧಾನಸಭಾ ವ್ಯಾಪ್ತಿಯ ಕಾರೆಹಳ್ಳಿ, ಬಾರಂದೂರು, ಕೆಂಚನಹಳ್ಳಿ, ಮಾವಿನಕರೆ, ತಾಷ್ಕಂಟ್ ನಗರ, ಹೀರಹಳ್ಳಿ, ಮಾರುತಿ ನಗರ , ಅಂತರಗಂಗೆ , ಶಿವಾಜಿ ವೃತ್ತ, ರಂಗಪ್ಪ ಸರ್ಕಲ್, ಕನಕ ಮಂಟಪ ಸೇರಿದಂತೆ ಹಲವು ಹಳ್ಳಿಗಳ ಮಾರ್ಗವಾಗಿ ಸಾಗಿದ ಪಂಚರತ್ನ ಯಾತ್ರೆಯಲ್ಲಿ ಹೆಚ್‌ಡಿಕೆ, ಜೆಡಿಎಸ್ ಪಕ್ಷದ ಅಭ್ಯರ್ಥಿ ಶಾರದ ಅಪ್ಪಾಜಿ ಗೌಡರಿಗೆ ಮತಯಾಚನೆ ಮಾಡಿದರು.
ರಾಜ್ಯದಲ್ಲಿನ ಪ್ರಸ್ತುತ ಸಮಸ್ಯೆಗಳಿಗೆ ಪಂಚರತ್ನ ಯೋಜನೆ ಮೂಲಕ ಪರಿಹಾರ ನೀಡುತ್ತೇವೆ. ಪಂಚರತ್ನ ಯೋಜನೆ ಮೂಲಕ ಶಿಕ್ಷಣ, ಆರೋಗ್ಯ, ಉದ್ಯೋಗ, ಕೃಷಿಗೆ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ಸಂಧ್ಯಾಕಾಲದಲ್ಲಿ ವಯೋವೃದ್ಧರಿಗೆ 5 ಸಾವಿರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ರಥಯಾತ್ರೆಯಲ್ಲಿ ಸಾಗಿ ಬಂದ ಮಾಜಿ ಸಿಎಂ ಹೆಚ್ಡಿಕೆ, ಭದ್ರಾವತಿ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ, ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಅವರಿಗೆ ಹೂವಿನ ಹಾರಗಳ ಜೊತೆ ವಿಭಿನ್ನ ಹಾರ ಸಹ ಹಾಕಿದ್ದಾರೆ.
ಭದ್ರಾವತಿಯ ಬಾರಂದೂರಿನಲ್ಲಿ ಅಡಿಕೆ ತಟ್ಟೆ ಹಾರ, ಗೌರಪುರದಲ್ಲಿ ಕಲ್ಲಂಗಡಿ ಹಾರ ಹಾಗೂ ಅತಂರಗಂಗೆ ಗ್ರಾಮದಲ್ಲಿ ವಾಟರ್ ಬಾಟಲ್ ಹಾರ ಹಾಕಿ, ಮುಖಂಡರು- ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ.
ಇನ್ನೂ ಪಂಚರತ್ನ ರಥಯಾತ್ರೆ ಸಾಗಿದ ಭದ್ರಾವತಿಯ ಹಳ್ಳಿಯ ರಸ್ತೆಗಳು ಕಿರಿದಾಗಿದ್ದರಿಂದ ಕೆಲಕಾಲ ವಾಹನ ಸವಾರರು ವಾಹನ ದಟ್ಟಣೆಯಿಂದ ಕಿರಿ ಕಿರಿ ಅನುಭವಿಸಿದರು.
ಸುಡುವ ಬಿಸಿಲಿನಲ್ಲಿ ತೆರೆದ ವಾಹನದಲ್ಲಿ ಮುಂದೆ ಸಾಗಿದ ಮಾಜಿ ಸಿಎಂ ಹೆಚ್ಡಿಕೆ, ಪ್ರತಿ ಹಳ್ಳಿಯಲ್ಲೂ ಕಾರ್ಯಕರ್ತರು ಹಾಗೂ ಜನರನ್ನುದ್ದೇಶಿಸಿ ಮಾತನಾಡಿದರು.
ನಮ್ಮದು ರೈತರು, ಕೂಲಿ ಕಾರ್ಮಿಕ ಪರವಾದ ಸರ್ಕಾರ ಎಂದು ಈಗಾಗಲೇ ಸಾಬೀತು ಪಡಿಸಿದ್ದೇವೆ. ಮುಂದಿನ ದಿನದಲ್ಲಿ ಈ ವರ್ಗದ ಜನರ ಕಣ್ಣೀರು ಒರೆಸುತ್ತೇವೆ. ರಾಜ್ಯದಲ್ಲಿ ಶ್ರೀಮಂತ, ಬಡವ ಎನ್ನುವ ಬೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವುದು ನಮ್ಮ ಉದ್ದೇಶವಾಗಿದ್ದು, ಭದ್ರಾವತಿಯ ವಿಐಎಸ್ ಎಲ್ ಮತ್ತು ಎಂಪಿಎಂ ಕಾರ್ಖಾನೆ ಕಾರ್ಮಿಕರ ಬದುಕು ಬೀದಿಗೆ ಬೀಳಲು ಬಿಡುವುದಿಲ್ಲ. ಅವರ ಅಳಲು ಆಲಿಸಲು ಮುಂದಿನ ದಿನದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನೀವು ಮನಸ್ಸು ಮಾಡ ಬೇಕು. ವಿಧಾನಸಭೆಗೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇನ್ನೂ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಹೆಚ್ಡಿಕೆ ರಥಯಾತ್ರೆ ಮುಂದುವರೆಸುತ್ತಿರುವುದು ಜಿಲ್ಲೆಯ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ನೀಡಿರುವುದಂತೂ ಸತ್ಯ.









