ಚಿತ್ರದುರ್ಗ: ಸರದಿ ಪ್ರಕಾರ ಸ್ವಾಮೀಜಿಯ ಖಾಸಗಿ ಕೊಠಡಿಗೆ ತೆರಳಬೇಕಿತ್ತು. ಆಗ ಸ್ವಾಮೀಜಿ ಚಾಕೊಲೇಟ್ ನೀಡುತ್ತಿದ್ದರು. ಅದನ್ನು ತಿಂದ ಬಳಿಕ ನಿದ್ದೆ ಬಂದಂತೆ ಆಗುತ್ತಿತ್ತು. ಎಚ್ಚರವಾದಾಗ ತುಂಬಾ ಸುಸ್ತು, ತೊಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. …
ಇದು ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ 14 ವರ್ಷದ ವಿದ್ಯಾರ್ಥಿನಿ ಪೊಲೀಸರ ಎದುರು ನೀಡಿದ ಹೇಳಿಕೆ. ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ಈ ಬಗ್ಗೆ ವಿವರ ಇದೆ.
ಸ್ವಾಮೀಜಿಯ ತೊಡೆ ಮೇಲೆ ಕುಳಿತಿದ್ದಾಗ ಎದೆ, ಕುತ್ತಿಗೆ ಭಾಗವನ್ನು ಮುಟ್ಟುತ್ತಿದ್ದರು. ಆಗ ನನಗೆ ಭಯವಾಗುತ್ತಿತ್ತು. ಹಾಸ್ಟೆಲ್ ವಾರ್ಡನ್ ಸೂಚನೆಯಂತೆ ಪ್ರತಿ ಭಾನುವಾರ ಸ್ವಾಮೀಜಿಯ ಖಾಸಗಿ ಕೊಠಡಿಗೆ ತೆರಳಬೇಕಿತ್ತು. ಟೈಂ ಟೇಬಲ್ ಬದಲಾವಣೆ ಮಾಡಿದ್ದರಿಂದ ಪ್ರತಿ ಸೋಮವಾರ ಹೋಗುತ್ತಿದ್ದೆ. ಅಲ್ಲಿಗೆ ಹೋಗಿ ಬಂದ ನಂತರ ಪ್ರತಿ ತಿಂಗಳು ಸರಿಯಾಗಿ ಪಿರೀಯಡ್ಸ್ ಆಗುತ್ತಿರಲಿಲ್ಲ ಕೊಠಡಿಯಲ್ಲಿ ಮಲಗಿರುವಾಗ ಸ್ವಾಮೀಜಿ ನನ್ನನ್ನು ಬಳಸಿಕೊಂಡಿರಬಹುದು. ಟೈಂ ಟೇಬಲ್ ಪ್ರಕಾರ ಹೋಗದೇ ಇದ್ದರೆ ವಾರ್ಡನ್ ರಶ್ಮಿ ಹೊಡೆಯುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ.

ಆಪಾದಿತರು ಮಕ್ಕಳ ಸುರಕ್ಷತೆ ಮತ್ತು ಪೋಷಣೆಯ ಜವಬ್ದಾರಿ ಹೊತ್ತಿದ್ದ ಮಠದ ಪೀಠಾಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ಸಂತ್ರಸ್ತ ಅಪ್ರಾಪ್ತ ಬಾಲಕಿಯರಿಗೆ ಅವರ ಇಚ್ಛೆಗೆ ವಿರುದ್ಧವಾಗಿ ಮತ್ತು ಭರಿಸುವ ಚಾಕೋಲೇಟ್ ತಿನ್ನಿಸಿ ಅರೆಪ್ರಜ್ಞಾವಸ್ಥೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿಯೂ ಆಗಿರುವ ಮಠದ ಅಡುಗೆ ಸಹಾಯಕಿಯನ್ನು ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.
ಐಪಿಸಿ 376 (ಸಿ, 3, ಎಬಿ) 34, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ), ಬಾಲನ್ಯಾಯ ಕಾಯ್ದೆ–2015 ಹಾಗೂ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆಯಡಿ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.
ವಾರ್ಡನ್ ರಶ್ಮಿ ಮುರುಘಾ ಶ್ರೀಗಳ ಸೂಚನೆ ಮೇರೆ ಸಂತ್ರಸ್ತ ಬಾಲಕಿಯರನ್ನು ಅಕ್ರಮ ಲೈಂಗಿಕ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳಲು ಸಹಕರಿಸಿ, ಸಂತ್ರಸ್ತ ಬಾಲಕಿಯರನ್ನು ಪುಸಲಾಯಿಸಿ ಕಳುಹಿಸಿಕೊಟ್ಟಿದ್ದಾರೆ. ಅಪ್ರಾಪ್ತಳೆಂದು ತಿಳಿದಿದ್ದರೂ ಕೋಲು, ಸ್ಕೇಲ್ ನಿಂದ ಹೊಡೆದು ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿ ಅಪರಾಧವೆಸಗಿದ್ದಾರೆ.
ಇವರ ವಿರುದ್ಧ ಐಪಿಸಿ 366 (ಎ) 323, 34, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ), ಬಾಲನ್ಯಾಯ ಕಾಯ್ದೆ–2015 ಹಾಗೂ ಧಾರ್ಮಿಕ ಸಂಸ್ಥೆಗಳ ದುರ್ಬಳಕೆ ತಡೆ ಕಾಯ್ದೆಯಡಿ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.