ಬೆಂಗಳೂರು: ಸರ್ಕಾರದ ತಪ್ಪು ನಿರ್ಧಾರ, ಬೇಜವಾಬ್ದಾರಿತನ, ಉಡಾಫೆತನದಿಂದ ನಾಡಿನ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಭೋಜನ ವಿರಾಮದ ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರದಿಂದ ವಯಸ್ಸಾದ ಜಾನುವಾರುಗಳನ್ನು ರೈತರು ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದಾರೆ. ಗೋಶಾಲೆಗೆ ಸರ್ಕಾರ ನೀಡುವ ಹಣ ಸಾಕಾಗುತ್ತಿಲ್ಲ, ಇದರಿಂದ ಗೋಶಾಲೆಗಳು ಕೂಡ ಅವುಗಳಿಗೆ ಸರಿಯಾಗಿ ಮೇವು ನೀಡುತ್ತಿಲ್ಲ. ಬರಡಾದ, ವಯಸ್ಸಾದ ಜಾನುವಾರುಗಳನ್ನು ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಕಳೆದ 3 ವರ್ಷಗಳ ಅವಧಿಯಲ್ಲಿ 15 ಲಕ್ಷ ಜಾನುವಾರುಗಳು ಕಣ್ಮರೆಯಾಗಿವೆ. ಇದರ ಜೊತೆಗೆ ಚರ್ಮಗಂಟು ರೋಗ ಬಂದಿದೆ, ಕಳೆದ ಅಧಿವೇಶನದಲ್ಲಿ ಜನವರಿ ಒಳಗೆ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿ ಮುಗಿಸುವುದಾಗಿ ಸಚಿವರು ಹೇಳಿದ್ದರು. ಇಲಾಖೆಯವರೇ ನೀಡಿರುವ ಲೆಕ್ಕದ ಪ್ರಕಾರ ಇನ್ನು 14 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಲ್ಲ. ಈ ರೋಗದಿಂದ ಎತ್ತುಗಳು, ಎಮ್ಮೆಗಳು, ಹಸುಗಳು ಸುತ್ತಹೋಗಿವೆ. ಅದಕ್ಕೆ ಪರಿಹಾರ ನೀಡಿಲ್ಲ, ಹಾಲಿನ ಉತ್ಪಾದನೆ ಕೂಡ ಇಳಿಕೆಯಾಗಿದೆ. ಇದರಿಂದ 6 ಕೋಟಿ 66 ಲಕ್ಷ ರೂಪಾಯಿ ನಿತ್ಯ ರೈತರಿಗೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಡೀಸೆಲ್ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ, ಇದಕ್ಕಾಗಿ 500 ಕೋಟಿ ಬಜೆಟ್ ಅನುದಾನ ಮೀಸಲಿಟ್ಟಿದ್ದಾರೆ. ಆದರೆ ಈ ಯೋಜನೆ ಇನ್ನೂ ಚಾಲನೆಯನ್ನೇ ಪಡೆದುಕೊಂಡಿಲ್ಲ. 53 ಲಕ್ಷದ 22 ಸಾವಿರ ರೈತರಿಗೆ 382 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಬಜೆಟ್ ನಲ್ಲಿ ಹೇಳಲಾಗಿದೆ. ಇವತ್ತಿನ ವರೆಗೆ ಬಿಡಿಗಾಸು ಹಣ ರೈತರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.
ಸಂವಿಧಾನ ತಿದ್ದುಪಡಿ ಮಾಡಿ ಸಂವಿಧಾನದ 9ನೇ ಶೆಡ್ಯೂಲ್’ಗೆ ಸೇರಿಸದೆ ನಾವು ಮೀಸಲಾತಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲೇ ನಾನು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕಾದರೆ ಸಂವಿಧಾನ ತಿದ್ದುಪಡಿ ಆಗಬೇಕು ಎಂದು ಹೇಳಿದ್ದೆ. ಕೇಂದ್ರ ಸರ್ಕಾರದ ಮುಂದೆ ಮೀಸಲಾತಿ ಹೆಚ್ಚಳದ ಯಾವುದೇ ಪ್ರಸ್ತಾಪನೆ ಇಲ್ಲ ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವರಾದ ಎ. ನಾರಾಯಣಸ್ವಾಮಿ ಅವರು ಹೇಳಿದ್ದಾರೆ. ಆದರೆ ಈಗ ಪ್ರಸ್ತಾವನೆ ಕಳಿಸುತ್ತೇವೆ ಎಂದು ತೀರ್ಮಾನ ಮಾಡಿದ್ದೀರಿ. ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ, ನಾವು ನಿಮ್ಮ ಜೊತೆ ಬರುತ್ತೇವೆ. ಎಸ್,ಸಿ ಹಾಗೂ ಎಸ್,ಟಿ ಜನರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದಕ್ಕೆ ನಾವು ಬದ್ಧರಿದ್ದೇವೆ. 25 ಜನ ಸಂಸದರು ಇದ್ದಾರೆ, ಇಲ್ಲಿ ಸರ್ಕಾರವೂ ಬಿಜೆಪಿಯದೇ ಇದೆ. ದೆಹಲಿಗೆ ಹೋಗಿ ಕೂತು ಈ ಕೆಲಸ ಮಾಡಿಸಿ. ಒಟ್ಟಾರೆ ಈ ಮೀಸಲಾತಿ ಹೆಚ್ಚಳ ಸಂವಿಧಾನಾತ್ಮಕವಾಗಿ ಜಾರಿಯಾಗಬೇಕು ಎಂಬುದು ನಮ್ಮ ಒತ್ತಾಸೆ ಎಂದು ಹೇಳಿದರು.
ಈ ಸರ್ಕಾರ ಹೊಸದಾಗಿ ಮನೆ ಮಂಜೂರು ಮಾಡಿಲ್ಲ, ಈ ಹಿಂದೆ ನೀಡಿದ್ದ ಮನೆಗಳ ಕಾಮಗಾರಿ ನಡೆಯುತ್ತಿತ್ತು, ಅವುಗಳಲ್ಲಿ 4,93,000 ಮನೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಒಂದೇ ಒಂದು ಹೊಸ ಮನೆಯನ್ನು ನೀಡಿಲ್ಲ. ಇದನ್ನೇ ದೊಡ್ಡ ಸಾಧನೆ ಎಂದರೆ ಹೇಗೆ? ಕೃಷ್ಣಪ್ಪನವರು ಮಂತ್ರಿಯಾಗಿದ್ದ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಜಮೀನು ನೀಡಿ 1 ಲಕ್ಷ ಮನೆ ಕಟ್ಟಿಕೊಡಬೇಕು ಎಂದು ತೀರ್ಮಾನ ಮಾಡಿದ್ದೆವು, ಇದಕ್ಕೆ ಸರ್ಕಾರ ಆದೇಶವನ್ನೇ ನೀಡಿಲ್ಲ. ಪ್ರಧಾನಮಂತ್ರಿಗಳ ಆವಾಸ್ ಯೋಜನೆಯಡಿ 18 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದ್ದರು, ಆದರೆ ಎಲ್ಲ ಗೃಹ ನಿರ್ಮಾಣ ಯೋಜನೆಯಡಿ ಒಟ್ಟು 4 ವರ್ಷದಲ್ಲಿ 4 ಲಕ್ಷದ 93 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದ್ದಾರೆ. ವರ್ಷಕ್ಕೆ 1 ಲಕ್ಷ ಮನೆ ನಿರ್ಮಾಣ ಮಾಡಿದಂತಾಗುತ್ತದೆ, ಹೊಸದಾಗಿ ಒಂದು ಮನೆಯನ್ನು ಮಂಜೂರು ಮಾಡಿಲ್ಲ, ಹಿಂದೆ ನೀಡಲಾಗಿದ್ದ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ನಮ್ಮ ಕಾಲದಲ್ಲಿ 14 ಲಕ್ಷದ 53 ಸಾವಿರ ಹೊಸ ಮನೆಗಳನ್ನು ನಿರ್ಮಾಣ ಮಾಡಿದ್ದು. ಇಂದು 25 ರಿಂದ 30 ಲಕ್ಷ ಸೂರಿಲ್ಲದ ಬಡವರು ರಾಜ್ಯದಲ್ಲಿ ಇದ್ದಾರೆ ಎಂದು ಹೇಳಿದರು.
ನಮ್ಮ ಸರ್ಕಾರವು ಆಗಸ್ಟ್ 2019ರಿಂದ ಈ ವರೆಗೆ ಒಟ್ಟು ವಿವಿಧ ವಸತಿ ಯೋಜನೆಗಳಡಿ 7500 ಕೋಟಿ ರೂ. ವೆಚ್ಚದಲ್ಲಿ 4,93,000 ಮನೆಗಳನ್ನು ಪೂರ್ಣಗೊಳಿಸಿದೆ ಎಂದು ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಹೇಳಿಸಿದೆ. ಒಂದು ವೇಳೆ ಹೊಸ ಮನೆಗೆ ಮಂಜೂರಾತಿ ನೀಡಿದ್ದೆ ಆದಲ್ಲಿ ಈ ಸರ್ಕಾರ ಯಾವ ವರ್ಷ ಎಷ್ಟು ಮನೆಗಳನ್ನು ಹೊಸದಾಗಿ ಮಂಜೂರು ಮಾಡಿದೆ ಎಂಬ ಆದೇಶದ ಕಾಪಿಯನ್ನು ಸದನದ ಮುಂದಿಡಲಿ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ನಮ್ಮ ಸರ್ಕಾರ ಮತ್ತು ಈಗಿನ ಸರ್ಕಾರದ ಮೇಲೆ ಇರುವ ಎಲ್ಲಾ ಆರೋಪಗಳ ಬಗ್ಗೆ ತನಿಖೆ ಮಾಡಿಸಿ. ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡುವುದರಿಂದ ಸತ್ಯಾಸತ್ಯತೆ ಹೊರಬರುವುದಿಲ್ಲ ಎಂದರು.
ನಮ್ಮ ಸರ್ಕಾರವಿದ್ದಾಗ ಪಿಎಫ್’ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಲ್ಲ
ನಮ್ಮ ಸರ್ಕಾರ ಇದ್ದಾಗ ಪಿಐಎಫ್ ನ ಯಾವುದೇ ಕಾರ್ಯಕರ್ತರನ್ನು ಬಿಡುಗಡೆ ಮಾಡಿರಲಿಲ್ಲ. ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ನಾನು ಬರೆದ ಪತ್ರಕ್ಕೆ ಉತ್ತರಿಸಿ, ಸಿದ್ದರಾಮಯ್ಯ ಅವರ ಸರ್ಕಾರ ರೈತ ಸಂಘಟನೆಗಳ ಮುಖಂಡರನ್ನು, ದಲಿತ
ಸಂಘಟನೆಯವರನ್ನು, ನಾಡಿನ ಪರವಾಗಿ ಹೋರಾಟ ಮಾಡಿದ ಕಾರಣಕ್ಕೆ ಜೈಲು ಸೇರಿದವರನ್ನು ಬಿಡುಗಡೆ ಮಾಡಿದ್ದಾರೆ, ಪಿಎಫ್’ಐ ನ ಯಾವುದೇ ಸದಸ್ಯನನ್ನು ಬಿಡುಗಡೆ ಮಾಡಿಲ್ಲ ಎಂದಿದ್ದಾರೆ. 13-06-2022ರಲ್ಲಿ ಗೃಹ ಇಲಾಖೆಯ ಹೋಂ ಸೆಕ್ರೆಟರಿ ಅವರಿಗೆ ಪತ್ರ ಬರೆದು ಹಿಂದಿನ ನಮ್ಮ ಸರ್ಕಾರ ಯಾವ ವರ್ಷ, ಎಷ್ಟು ಪಿಎಫ್’ಐ ಕಾರ್ಯಕರ್ತರನ್ನು ನಾವು ಬಿಡುಗಡೆ ಮಾಡಿತ್ತು? ಎಂದು ಪ್ರಶ್ನೆ ಕೇಳಿದ್ದೆ, ಇವತ್ತಿನವರೆಗೆ ಈ ಸರ್ಕಾರ ಉತ್ತರ ನೀಡಿಲ್ಲ. ಸಂಬಂಧ ಇರುವುದು ಪಿಎಫ್’ಐ ಗೂ ಬಿಜೆಪಿಗೂ, ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಐಎಸ್’ಎಲ್ ಮುಚ್ಚಬಾರದು
ಭದ್ರಾವತಿಯ ವಿಐಎಸ್’ಎಲ್ ಮುಚ್ಚುವುದಾಗಿ ರಾಜ್ಯಸಭೆಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ. 1923ರಲ್ಲಿ ಮಹಾರಾಜರ ಕಾಲದಲ್ಲಿ ಈ ಕಾರ್ಖಾನೆ ಸ್ಥಾಪನೆ ಮಾಡಲಾಗಿತ್ತು, ಇದನ್ನು ಮುಚ್ಚಲು ಹೊರಟಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇದನ್ನು ಮುಚ್ಚಿದರೆ ಅಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದು ತಿಳಿಸಿದರು.