ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ಸಿನಿಮಾ ತಂಡ ಚಿತ್ರದ ತುಣುಕು, ಮೂಲಕ ಹಾಡುಗಳ ಮೂಲಕ ಭರವಸೆ ಹುಟ್ಟಿಸಿದಂತೆ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.
‘ಹೊಂದಿಸಿ ಬರೆಯಿರಿ’ ಮೂಲಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಕಾಲೇಜು ಹಂತದ ಸ್ನೇಹಿತರ ಬದುಕಿನಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಬದುಕಿನ ಪಾಠ ಹೇಳಿದ್ದಾರೆ. ಭಾವನೆಗಳ ಜರ್ನಿ ಜೊತೆಗೆ ಒಂದಿಷ್ಟು ಪ್ರೀತಿ, ಸ್ನೇಹ, ತ್ಯಾಗ, ಹರಟೆ ಎಲ್ಲವೂ ಚಿತ್ರದಲ್ಲಿದೆ. ತೆರೆ ಮೇಲೆ ಸಿನಿಮಾ ನೋಡಿದವರ ಮನದಲ್ಲಿ ಹೌದಲ್ಲವಾ ಎಂಬ ಭಾವ ಮೂಡಿಸಿ ಹೊಸ ಅನುಭವ ನೀಡುವ ಹೊಂದಿಸಿ ಬರೆಯಿರಿ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ ಸಿಕ್ಕಿದೆ. ಸಿನಿಮಾವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಪ್ರೇಮಿಗಳ ದಿನಕ್ಕೆ ಒಂದು ಅರ್ಥಪೂರ್ಣ ಸಿನಿಮಾ ಈ ಚಿತ್ರ ಎಂದರೆ ತಪ್ಪಾಗೋದಿಲ್ಲ.
ಕಲರ್ ಫುಲ್ ತಾರಾಗಣ ಹೊಂದಿಸಿ ಬರೆಯಿರಿ ಚಿತ್ರದ ಮೈನ್ ಅಟ್ರ್ಯಾಕ್ಷನ್. ನವೀನ್ ಶಂಕರ್, ಪ್ರವೀಣ್ ತೇಜ್, ಶ್ರೀ ಮಹಾದೇವ್ ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ ಎಲ್ಲರೂ ತಮ್ಮ ಪಾತ್ರಗಳ ಮೂಲಕ ಕಾಡುತ್ತಾರೆ. ಹಾಡು, ಸಂಗೀತ, ಕಾಡುವ ಕಥೆ, ಸಿನಿಮಾ ಬಗ್ಗೆ ಕೇಳಿ ಬರ್ತಿರುವ ಉತ್ತಮ ವಿಮರ್ಶೆ ಎಲ್ಲವೂ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಪ್ರೇಕ್ಷಕರು ಮನ ಸೋಲುವಂತೆ ಮಾಡಿದೆ.
ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೋ ಕೋಸ್ಟ ಸಂಗೀತ ನಿರ್ದೇಶನ, ಶಾಂತಿ ಸಾಗರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.