ಟ್ರಾಫಿಕ್ ದಂಡ 50 % ಡಿಸ್ಕೌಂಟ್, 120 ಕೋಟಿ ಕಲೆಕ್ಷನ್..!
ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ರೆ, ಆಟೋಮ್ಯಾಟಿಕ್ ಆಗಿಯೂ ನಿಮ್ಮ ವಾಹನಗಳ ಮೇಲೆ ಫೈನ್ ಬಿದ್ದಿರುತ್ತೆ. ಇದೇ ರೀತಿ 1300 ಕೋಟಿ ರೂಪಾಯಿ ದಂಡ ಬಾಕಿ ಉಳಿದಿತ್ತು. ಟ್ರಾಫಿಕ್ ಪೊಲೀಸ್ರು ಶೇಕಡ 50 ರಷ್ಟು ರಿಯಾಯ್ತಿ ನೀಡಿ, ಬಾಕಿ ಉಳಿದಿದ್ದ ದಂಡವನ್ನು ಪಾವತಿ ಮಾಡಲು ಆದೇಶ ಹೊರಡಿಸಿದ್ದರು. ಬೆಂಗಳೂರಿನಲ್ಲಿ ನಾಮುಂದು ತಾಮುಂದು ಎಂದು ನೂಕುನುಗ್ಗಲಿನಲ್ಲಿ ಜನರು ಟ್ರಾಫಿಕ್ ಪೊಲೀಸ್ರು ಬಳಿ, ಟಿಟಿಎಂಸಿ ಬಿಲ್ಡಿಂಗ್, ಪೇಟಿಎಂ ಆ್ಯಪ್ ಮೂಲಕವೂ ದಂಡ ಪಾವತಿ ಮಾಡಿದ್ದಾರೆ. ಕೇವಲ 9 ದಿನಗಳಲ್ಲಿ ಸರ್ಕಾರದ ಖಜಾನೆಗೆ ಹರಿದು ಬಂದಿದ್ದರು ಬರೋಬ್ಬರಿ 120 ಕೋಟಿ ರೂಪಾಯಿ. ಆದರೆ ಈ ರೀತಿ ದಂಡ ಪಾವತಿ ಮಾಡಿಸಿಕೊಂಡಿದ್ದು, ಕಾನೂನು ಪ್ರಕಾರ ತಪ್ಪು ಎನ್ನುವ ವಾದ ಸೃಷ್ಟಿಯಾಗಿದೆ. ಕಾರಣ ಏನಂದ್ರೆ 6 ತಿಂಗಳ ಹಿಂದಿನ ದಂಡ ಮನ್ನಾ ಆಗಬೇಕು ಅನ್ನೋದು.
ಟ್ರಾಫಿಕ್ ದಂಡ ಕಲೆಕ್ಟ್ ಆಗಿದ್ದು ಯಾವ ದಿನ ಎಷ್ಟು..?
ಫೆಬ್ರವರಿ 03 ರಿಂದ ಆರಂಭವಾದ ಟ್ರಾಫಿಕ್ ಫೈನ್ ಕಲೆಕ್ಷನ್ನಲ್ಲಿ ಮೊದಲ ದಿನ 2.24 ಲಕ್ಷ ಕೇಸ್ಗಳಿಂದ 7 ಕೋಟಿ ರೂಪಾಯಿ ಸಂಗ್ರಹ ಆಗಿತ್ತು. ಎರಡನೇ ದಿನ ಫೆಬ್ರವರಿ 04 ರಂದು 3 ಲಕ್ಷ ಕೇಸ್ಗಳಿಂದ 9 ಕೋಟಿ ದಂಡ ಪಾವತಿಯಾಗಿತ್ತು. ಫೆಬ್ರವರಿ 05 ರಂದು 2.87 ಲಕ್ಷ ಕೇಸ್ಗಳಲ್ಲಿ ದಂಡ ಪಾವತಿಯಾಗಿದ್ದು, ಸಂಗ್ರಹವಾದ ಹಣ 7.49 ಕೋಟಿ ರೂಪಾಯಿ. ಫೆಬ್ರವರಿ 06 ರಂದು 3.34 ಲಕ್ಷ ಕೇಸ್ಗಳಿಂದ 9.57 ಕೋಟಿ ರೂಪಾಯಿ ದಂಡ ಸಂಗ್ರಹ ಆಗಿತ್ತು. ಫೆಬ್ರವರಿ 07 ರಂದು 3.45 ಲಕ್ಷ ಕೇಸ್ಗಳಿಂದ ಸಂಗ್ರಹ ಆಗಿದ್ದು 9.70 ಕೋಟಿ ರೂಪಾಯಿ. ಫೆಬ್ರವರಿ 08 ರಂದು 3.87 ಲಕ್ಷ ಕೇಸ್ಗಳಿಂದ 10 ಕೋಟಿ ದಂಡ ಸಂಗ್ರಹ ಆಗಿತ್ತು. ಫೆಬ್ರವರಿ 09 ರಂದು 5.51 ಲಕ್ಷ ಕೇಸ್ನಿಂದ 14.64 ಕೋಟಿ ರೂಪಾಯಿ ದಂಡ ಸಂಗ್ರಹ ಆಗಿತತ್ಉ. ಕೊನೆಯ ಎರಡು ದಿನ ಭರ್ಜರಿ ಕಲೆಕ್ಷನ್ ಆಗಿದ್ದು ಫೆಬ್ರವರಿ 10ರಂದು 6.70 ಲಕ್ಷ ಕೇಸ್ನಿಂದ 17.61 ಕೋಟಿ ರೂಪಾಯಿ ದಂಡ ಮತ್ತು ಫೆಬ್ರವರಿ 11ರಂದು 3.85 ಲಕ್ಷ ಕೇಸ್ಗಳಿಂದ 31 ಕೋಟಿ ಸಂಗ್ರಹ ಆಗಿದೆ.
6 ತಿಂಗಳ ಹಿಂದಿನ ದಂಡ ಕಟ್ಟಿಸಿಕೊಳ್ಳಲು ಅವಕಾಶವೇ ಇಲ್ಲ..!
ಟ್ರಾಫಿಕ್ ಪೊಲೀಸ್ರು ಯಾವುದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಕೇಸ್ ದಾಖಲು ಮಾಡಿದಾಗ ದಂಡ ಪಾವತಿ ಮಾಡದಿದ್ದರೆ, ಕನಿಷ್ಠ ಪಕ್ಷ 6 ತಿಂಗಳ ಒಳಗಾಗಿ ವಾಹನ ಸವಾರರ ವಿರುದ್ಧ FIR ದಾಖಲು ಮಾಡಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಬೇಕು. ಭಾರತದ ಸಿಆರ್ಪಿಸಿ ಆಕ್ಟ್ ಪ್ರಕಾರ ಸಂಚಾರಿ ನಿಯಮ ಉಲ್ಲಂಘನೆ ಕೇಸ್ ಹಾಕಲು ಪೊಲೀಸರಿಗೆ ಇರುವ ಕಾಲಾವಕಾಶ ಕೇವಲ 6 ತಿಂಗಳು ಮಾತ್ರ. ನ್ಯಾಯಾಲಯದಲ್ಲಿ ದಾವೆ ಹೂಡಲು ಯಾವುದೇ ಒಂದು ಪ್ರಕರಣಕ್ಕೆ ಇಂತಿಷ್ಟು ಲಿಮಿಟೇಷನ್ ಪೀರಿಯಡ್ ಎಂದು ನಿಗದಿ ಆಗಿರುತ್ತದೆ. ಈ ಕೇಸ್ನಲ್ಲಿ ಲಿಮಿಟೇಷನ್ ಪೀರಿಯಡ್ 6 ತಿಂಗಳಾಗಿದ್ದು, ಆ ಬಳಿಕ ಕೇಸ್ ಹಾಕಲು ಸಾಧ್ಯವಿಲ್ಲ, ಜೊತೆಗೆ ಕೋರ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡೋದು ಸಾಧ್ಯವಿಲ್ಲ. ಇದು ನ್ಯಾಯ ಅಲ್ಲ ಎಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಕಾನೂನು ಆಧರಿಸಿಯೇ ಈ ಆದೇಶ ಬಂದಿರುವಾಗ ಪೊಲೀಸ್ರು 120 ಕೋಟಿ ಹಣ ಸಂಗ್ರಹ ಮಾಡಿದ್ದು ಸರಿಯಲ್ಲ ಅಂತ ಸ್ಪೆಷಲ್ ಕಮಿಷನರ್ ಎಂ.ಎ ಸಲೀಂ ಅವರಿಗೆ ಪತ್ರ ಬರೆಯಲಾಗಿದೆ.
ಈಗ ದಂಡ ಕಟ್ಟದೆ ಉಳಿದವರಿಗೆ ಬಂಪರ್ ಲಾಟರಿ..!
6 ತಿಂಗಳ ಬಳಿಕ ದಂಡ ಕಟ್ಟಿಸಿಕೊಳ್ಳುವಂತಿಲ್ಲ ಎನ್ನುವುದು ಪೊಲೀಸ್ರಿಗೆ ಗೊತ್ತಿಲ್ವಾ ಅಂದ್ರೆ ಗೊತ್ತಿರುತ್ತದೆ. ಆದರೂ ಈ ರೀತಿಯ ಆಫರ್ ಕೊಟ್ಟು ಸಾರ್ವಜನಿಕರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಲಾಗಿದೆ ಎನ್ನಲಾಗ್ತಿದೆ. 2018ರಲ್ಲಿ ಈ ಬಗ್ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಸ್ಪಷ್ಟ ಆದೇಶ ಮಾಡಿದ್ದು, ಟ್ರಾಫಿಕ್ ಪೊಲೀಸರು ಈ ಬಗ್ಗೆ ಆದೇಶ ಪತ್ರದಲ್ಲಿ ಉಲ್ಲೇಖ ಮಾಡದೆ ದಂಡ ವಸೂಲಿ ಮಾಡಿದ್ದಾರೆ, ಟ್ರಾಫಿಕ್ ಪೊಲೀಸರು ಮಾಡುತ್ತಿರುವ ಕೆಲಸ ಕಾನೂನು ಬಾಹಿರ ಎಂದು ಬೆಂಗಳೂರು ವಿಶೇಷ ಸಂಚಾರಿ ಆಯುಕ್ತ ಎಂ.ಎ ಸಲೀಂಗೆ ದಿ ವೀಲರ್ಸ್ ಸಂಘಟನೆ ಪತ್ರ ಕೂಡ ಬರೆದಿದ್ದು, ನಿಮ್ಮ ಆದೇಶದಲ್ಲಿ ಸಾಕಷ್ಟು ಗೊಂದಲವಿದೆ. ನೀವು ಹಾಕಿರುವ ಫೈನ್‌ಗೆ 6 ತಿಂಗಳ ಕಾಲ ವಾಲಿಡಿಟಿ ಅಂತ ಹೇಳಿದೆ. ಆದರೂ ನೀವು ವರ್ಷಗಳ ಹಿಂದಿನ ಫೈನ್ ಕಟ್ಟಿಸಿಕೊಂಡಿದ್ದೀರಿ. ಜನಸಾಮಾನ್ಯರಿಗೆ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಪತ್ರ ಬರೆಯಲಾಗಿದೆ. ಆದರೆ ಇಲ್ಲೀವರೆಗೂ ಸ್ಪಷ್ಟನೆ ಸಿಕ್ಕಿಲ್ಲ ಎಂದು ದಿ ವೀಲರ್ಸ್ ಸಂಘಟನೆ ಅಧ್ಯಕ್ಷ ಅಮರೇಶ್ ಹೇಳಿದ್ದಾರೆ. ಇದಕ್ಕೆ ಸರ್ಕಾರ ಅಥವಾ ಪೊಲೀಸರಿಂದ ಏನು ಸ್ಪಷ್ಟನೆ ಬರುತ್ತೆ ಅನ್ನೋದನ್ನು ಕಾದು ನೋಡಬೇಕು.