ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಬಿಐ, ಜಾರಿ ನಿರ್ದೇಶನಾಲಯ ಸೇರಿದಂತೆ ಸಾಕಷ್ಟು ತನಿಖಾ ಸಂಸ್ಥೆಗಳಿಂದ ವಿಚಾರಣೆಗೆ ಒಳಪಟ್ಟಿದ್ದಾರೆ. ಇದರ ನಡುವೆ ಕರ್ನಾಟಕ ಹೈಕೋರ್ಟ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್’ಗೆ ಬಿಗ್ ರಿಲೀಫ್ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ರಾಜ್ಯ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆ ನೀಡಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಫೆಬ್ರವರಿ 24ರವರೆಗೂ ತನಿಖೆ ನಡೆಸದಂತೆ ಸಿಬಿಐ ಅಧಿಕಾರಿಗಳಿಗೆ ಸೂಚನೆ ನೀಡಿದೆ. ತನಿಖಾಧಿಕಾರಿ ಪ್ರಕರಣದ ತನಿಖಾ ಪ್ರಗತಿ ವರದಿಯನ್ನು ಫೆಬ್ರವರಿ 24ರೊಳಗೆ ನೀಡಬೇಕು. ಅಲ್ಲೀವರೆಗೂ ತನಿಖೆಯನ್ನು ಮುಂದುವರಿಸದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಮಾಡಿದೆ. ಮುಂದಿನ ವಿಚಾರಣೆ ತನಕ ಯಾವುದೇ ಕ್ರಮ ಜರುಗಿಸಬಾರದು. ಕುಟುಂಬಸ್ಥರನ್ನೂ ವಿಚಾರಣೆಗೆ ಕರೆಯದಂತೆ ಸಿಬಿಐ ಪರ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.
ಚುನಾವಣೆ ಸಂದರ್ಭದಲ್ಲೇ ವಿಚಾರಣೆ ನೆಪದಲ್ಲಿ ಕಿರುಕುಳ..!
KPCC ಅಧ್ಯಕ್ಷ ಸ್ಥಾನ ನಿರ್ವಹಣೆ ಮಾಡುತ್ತಿರುವ ಡಿ.ಕೆ ಶಿವಕುಮಾರ್ ಅವರ ಮೇಲಿನ ಪ್ರಕರಣದಲ್ಲಿ CBI ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕಿರುಕುಳ ನೀಡುವ ಕೆಲಸ ಮಾಡ್ತಿದ್ದಾರೆ ಅನ್ನೋದು ಡಿ.ಕೆ ಶಿವಕುಮಾರ್ ಪರ ವಕೀಲರ ಆರೋಪ ಆಗಿತ್ತು. ಚುನಾವಣಾ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್‌ಗೆ ಹಿಂಸೆ ನೀಡಲಾಗ್ತಿದೆ. ಕುಟುಂಬದ ಸದಸ್ಯರಿಗೂ ಸಿಬಿಐ ನೋಟಿಸ್ ಕೊಟ್ಟಿದೆ ಎಂದು ಡಿ.ಕೆ ಶಿವಕುಮಾರ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಮಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮಾಡಲಾಗಿದೆ. ರಾಜ್ಯ ಸರ್ಕಾರದ ಮನವಿ ಆಧರಿಸಿ ತನಿಖೆ ಆರಂಭಿಸಿದ್ದೇವೆ. ಭ್ರಷ್ಟಾಚಾರ ಆರೋಪದಡಿ CBI ತನಿಖೆ ಆರಂಭಿಸಿದೆ. ಶೇಕಡ 44ರಷ್ಟು ಹೆಚ್ಚುವರಿ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ಮಾಹಿತಿ ಇದೆ ಎಂದು CBI (Central Bureau of Investigation) ಪರ ವಕೀಲರು ವಾದಿಸಿದ್ರು. ಇದಕ್ಕೆ ತಿರುಗೇಟು ಕೊಟ್ಟಿರುವ ಡಿ.ಕೆ ಶಿವಕುಮಾರ್ ಪರ ವಕೀಲರು, CBI ತನಿಖೆ ವೈಖರಿಯನ್ನೇ ಪ್ರಶ್ನಿಸಿದ್ದಾರೆ. CBI ಅಧಿಕಾರಿಗಳು ಡಿ.ಕೆ ಶಿವಕುಮಾರ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಅವರ ಕುಟುಂಬದವರ ಆಸ್ತಿಯ ಬಗ್ಗೆ ತನಿಖೆ ಮಾಡ್ತಿದ್ದಾರೆ. CBI ದಾಖಲಿಸಿರುವ ದೂರು ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.
CBI ತನಿಖೆ ಮುಕ್ತಾಯಕ್ಕೆ 6 ತಿಂಗಳ ಕಾಲಾವಕಾಶ ಬೇಕು..!
ಪ್ರಕರಣದ ತನಿಖೆ ಯಾವ ಹಂತದಲ್ಲಿ ಇದೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ CBI ಪರ ವಕೀಲರು ತನಿಖಾಧಿಕಾರಿ ಕೇಳಿ ಹೇಳಬೇಕು ಎಂದಿದ್ದಾರೆ. ಆ ವೇಳೆ ತನಿಖೆ ಯಾವ ಹಂತದಲ್ಲಿದೆ ಎಂಬುದರ ಪ್ರಗತಿ ವರದಿ ಕೇಳಿದ್ದು, ಹೈಕೋರ್ಟ್ ತನಿಖೆ ಮುಗಿಯಲು ಇನ್ನು ಎಷ್ಟು ದಿನಗಳ ಅಗತ್ಯವಿದೆ ಎಂಬ ಬಗ್ಗೆ ಸಿಬಿಐ ಪರ ವಕೀಲರಿಗೆ ಮರು ಪ್ರಶ್ನೆ ಹಾಕಿತ್ತು. ಇದಕ್ಕೆ ಉತ್ತರಿಸಿದ ಸಿಬಿಐ ಪರ ವಕೀಲರು ತನಿಖೆ ಮುಗಿಯಲು 6 ತಿಂಗಳ ಬೇಕು ಎಂದಿದ್ದರು. ಐಟಿ ಹಾಗು ED (Enforcement Directorate) ಯಿಂದ ಮಾಹಿತಿ ಬಂದ ಮೇಲೂ ಪರಿಶೀಲನೆ ಅಗತ್ಯ ಇದ್ಯಾ..? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಪರ ವಕೀಲ ಜಾದವ್ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿಕೊಂಡಿದ್ದು, ನ್ಯಾಯಮೂರ್ತಿಗಳು ಅಸ್ತು ಎಂದಿದ್ದಾರೆ. ತನಿಖೆಯ ಪ್ರಗತಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದ್ದು, ತನಿಖಾ ವರದಿ ಪರಿಶೀಲನೆ ಬಳಿಕ ಸಿಬಿಐ ತನಿಖೆ ಬೇಕಾ..? ಬೇಡ್ವಾ..? ಅನ್ನೋ ಬಗ್ಗೆ ಹೈಕೋರ್ಟ್ ನಿರ್ಧಾರ ಮಾಡಲಿದೆ.
‘ನನ್ನ ಮೇಲೆ 40 ಕೇಸ್ ಇವೆ.. ಇದ್ಯಾವ ಕೇಸ್ ಕೇಳ್ತೀನಿ’
ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಬಳಿ ಮಾಧ್ಯಮಗಳು ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆಗೆ ಪ್ರಯತ್ನಿಸಿದ್ದು, ನನ್ನ ಮೇಲೆ 40 ಪ್ರಕರಣಗಳು ಕೋರ್ಟ್’ನಲ್ಲಿ ನಡೆಯುತ್ತಿವೆ. ಪ್ರತಿ ದಿನವೂ ಮೂರ್ನಾಲ್ಕು ಪ್ರಕರಣಗಳಿಗೆ ಕಾಲ್ ಮಾಡ್ತಾರೆ. ಇದು ಯಾವ ಪ್ರಕರಣಕ್ಕೆ ಕೊಟ್ಟಿರುವ ಆದೇಶ ಎಂಬುದು ಗೊತ್ತಿಲ್ಲ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಕುರಿತು ಕೋರ್ಟ್ ಏನು..? ಹೇಳಿದೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ವಕೀಲರೊಂದಿಗೆ ಮಾತನಾಡಿ ಪ್ರತಿಕ್ರಿಯೆ ಕೊಡ್ತೇನೆ. ತಡೆ ಕೊಟ್ಟಿರುವುದು ಬಹಳ ಸಂತಸದ ವಿಚಾರ. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದಿದ್ದಾರೆ. ಸದಾಶಿವನಗರದ ನಿವಾಸದಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನ್ಯಾಷನಲ್ ಹೆರಾಲ್ಡ್ ಕೇಸ್ಗೆ ಸಂಬಂಧಿಸಿಯೂ ನೋಟಿಸ್ ಬಂದಿದೆ. ಚುನಾವಣಾ ಕಾರ್ಯದಲ್ಲಿ ಸಾಕಷ್ಟು ಬ್ಯುಸಿ ಇದ್ದರೂ ವಕೀಲರ ಜೊತೆ ಮಾತನಾಡ್ತೇನೆ. ಏನು ಆದೇಶ ಬಂದಿದೆ ಸರಿಯಾಗಿ ಇನ್ನೂ ಮಾಹಿತಿ ಇಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ತಡೆ ನೀಡಿರುವುದು ಕಾಂಗ್ರೆಸ್ಗೆ ಪಾಲಿಗೆ ಸಿಂಹ ಬಲ ಬಂದಂತಾಗಿದೆ. ಆದರೆ ಇನ್ಯಾವ ಕೇಸ್ನಲ್ಲಿ ಸಂಕಷ್ಟ ಕಾದಿದ್ಯೋ ಯಾರಿಗೆ ಗೊತ್ತು.