ಸಂಘಪರಿವಾರದ ಕಾರ್ಖಾನೆ ಎಂದೇ ಗುರುತಿಸಲ್ಪಟ್ಟಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭದ್ರ ಭುನಾದಿಯನ್ನೇ ಹೊಂದಿದ್ದರಾದರೂ ಇತ್ತೀಚೆಗೆ ಪಕ್ಷದೊಳಗೆ ನಡೆಯುತ್ತಿರುವ ಒಳ ಜಗಳಗಳು ಕೇಸರಿ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸವನ್ನು ಕಡಿಮೆ ಗೊಳಿಸಿದೆ. ಹಾಗಾಗಿಯೇ ಅಮಿತ್ ಶಾ ಅವರು ಜಿಲ್ಲೆಗೆ ಭೇಟಿ ನೀಡುವುದನ್ನು ಕೇಸರಿ ಕಾರ್ಯಕರ್ತರ ಆತ್ಮ ವಿಶ್ವಾಸ ಹೆಚ್ಚಿಸುವ ಕ್ರಮದಂತೆ ನೋಡಲಾಗಿತ್ತು. ಆದರೆ, ಈ ಪ್ರವಾಸದ ಕಾರಣಕ್ಕಾಗಿಯೇ ಪಕ್ಷದೊಳಗಿನ ಭಿನ್ನಮತ ಜಗಜ್ಜಾಹೀರಾಗಿದೆ.
ದಕ್ಷಿಣ ಕನ್ನಡದ ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಕೇಂದ್ರ ಸಚಿವ ಅಮಿತ್ ಶಾ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಹಲವು ಟಿಕೆಟ್ ಆಕಾಂಕ್ಷಿಗಳು ಇದನ್ನು ತಮ್ಮ ಪಾಲಿಗೆ ಬಂದ ಅವಕಾಶದಂತೆ ವರ್ತಿಸಿದ್ದಾರೆ. ಹಾಗಾಗಿಯೇ ಪುತ್ತೂರಿನಾದ್ಯಂತ ಅಮಿತ್ ಶಾರನ್ನು ಸ್ವಾಗತಿಸುವ ಬ್ಯಾನರ್ ಗಳು ʼಅಣಬೆʼಯಂತೆ ತಲೆ ಎತ್ತಿದೆ.

ಡಬಲ್ ಎಂಜಿನ್ ಸರ್ಕಾರವಿದ್ದರೂ ರಾಜ್ಯದಲ್ಲಿ ಪ್ರಭಾವಿ ನಾಯಕನ ಮುಖವಿಲ್ಲದೆ ಬಿಜೆಪಿಗೆ ಜನರ ಎದರು ಹೋಗಲು ಸಾಧ್ಯವಾಗುತ್ತಿಲ್ಲ. ಅದೇ ವೇಳೆ, ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳೂ ಬಿಜೆಪಿಗರ ಬಳಿ ಇಲ್ಲದ್ದರಿಂದ ಮತ್ತೆ ಕೇಂದ್ರ ಬಿಜೆಪಿ ನಾಯಕತ್ವದಲ್ಲಿ ಚುನಾವಣೆ ಎದುರಿಸೋ ಪ್ರಯತ್ನದಲ್ಲಿ ಕರಾವಳಿಯ ಬಿಜೆಪಿ ನಾಯಕರು ಇದ್ದಾರೆ. ಇದರ ನಡುವೆ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮೆಲ್ಲನೆ ತಮ್ಮ ಬಾಲ ಬಿಚ್ಚಿದ್ದಾರೆ. ಇದು ಪುತ್ತೂರಿನಲ್ಲಿ ಬಿಜೆಪಿ ಶಾಸಕ ಹಾಗೂ ಹಿಂದುತ್ವ ಕಾರ್ಯಕರ್ತರ ನಡುವೆ ಬಹಿರಂಗ ಕುಸ್ತಿ ನಡೆಯಲು ಕಾರಣವಾಗಿದೆ.

ಅರುಣ್ ಕುಮಾರ್ ಪುತ್ತಿಲ ಎಂಬ ಬಿಜೆಪಿ ಆಕಾಂಕ್ಷಿ ಮತ್ತು ಮಳೆಗಾಲದ ಅಣಬೆ.!
ಕರಾವಳಿ ಭಾಗದಲ್ಲಿ ಅದರಲ್ಲೂ ಪುತ್ತೂರಿನ ಆಸು ಪಾಸು ಕ್ಷೇತ್ರದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಎಂಬ ಸ್ಥಳೀಯ ಹಿಂದುತ್ವ ನಾಯಕ ಈ ಬಾರಿ ಪುತ್ತೂರಿನಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಕ್ಷೇತ್ರದಲ್ಲಿ ಸಕರಾತ್ಮಕ ಭಾವನೆ ಇಲ್ಲದಿರುವುದನ್ನು ಬಳಸಲು ಪುತ್ತಿಲ ಯೋಚಿಸಿದ್ದಾರೆ. ಕಾರ್ಯಕರ್ತರೊಂದಿಗೆ ಹಾಗೂ ಕ್ಷೇತ್ರದ ನಾಗರಿಕರೊಂದಿಗೆ ಅಷ್ಟಕ್ಕಷ್ಟೇ ಸಂಬಂಧ ಹೊಂದಿರುವ ಶಾಸಕ ಮಠಂದೂರು ಬಗ್ಗೆ ಬಿಜೆಪಿಗರಿಗೆ ಅಷ್ಟೇನೂ ಆಸಕ್ತಿಯಿಲ್ಲ. ಈ ಬಾರಿ ಮತ್ತೆ ಮಠಂದೂರು ಬಿಜೆಪಿಯಿಂದ ಸ್ಪರ್ಧಿಸಿದರೆ ಬಿಜೆಪಿ ಸೀಟು ಉಳಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ.
ಇದನ್ನೆಲ್ಲಾಸರಿಯಾಗಿ ಬಳಸಲು ಕಾರ್ಯರೂಪಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರು ಅಮಿತ್ ಶಾ ಅವರ ಆಗಮನಕ್ಕೆ ಪುತ್ತೂರಿನಾದ್ಯಂತ ಸ್ವಾಗತ ಕೋರಿ ಬೃಹತ್ ಬ್ಯಾನರ್‌ಗಳನ್ನು ಹಾಕಿದ್ದಾರೆ. ಬ್ಯಾನರ್‌ಗಳಲ್ಲಿ ಶಾಸಕ ಸಂಜೀವ ಮಠಂದೂರು ಅವರ ಚಿತ್ರ ಇಲ್ಲದಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ತನ್ನ ಸುತ್ತಲೂ ಹಿಂದುತ್ವ ವಾದಿ ಹುಡುಗರ ಪಡೆಯನ್ನೇ ಕಟ್ಟಿರುವ ಅರುಣ್ ಕುಮಾರ್ ವಿರುದ್ಧ ಬಹಿರಂಗವಾಗಿ ಮಾತನಾಡಲು ಸಾಧ್ಯವಾಗದ ಶಾಸಕರು ಪರೋಕ್ಷವಾಗಿ ಅವರನ್ನು ಹಿಯಾಳಿಸಿದ್ದರು.

ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಶಾಸಕ ಮಠಂದೂರು, “ಚುನಾವಣೆ ಬರುವಾಗ ಅಣಬೆಗಳಂತೆ ಕೆಲವರು ಹುಟ್ಟಿಕೊಳ್ಳುತ್ತಿದ್ದಾರೆ” ಎಂದು ಅರುಣ್ ಪುತ್ತಿಲರನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ಅರುಣ್ ಕುಮಾರ್ ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಅದಾದ ಬಳಿಕ ಗುರುವಾರ ಕಾರ್ಯಕ್ರಮವೊಂದಕ್ಕೆ ಪುತ್ತೂರಿನ ಬೊಳ್ವಾರು ಎಂಬಲ್ಲಿಗೆ ಬಂದಿದ್ದ ಶಾಸಕರಿಗೆ ಅರುಣ್ ಕುಮಾರ್ ಪುತ್ತಿಲ ರ ಬೆಂಬಲಿಗರು ಘೇರಾವ್ ಹಾಕಿ ಧಮ್ಕಿ ಹಾಕಿದ್ದಾರೆ.
“ಬುಧವಾರ ಸುದ್ದಿಗೋಷ್ಠಿಯಲ್ಲಿ ನೀವು ಅಣಬೆ ಎಂದಿದ್ದು ಯಾರಿಗೆ?. ಇದಕ್ಕೆ ಇನ್ನೂ ಸೃಷ್ಟೀಕರಣ ನೀಡಿಲ್ಲ ಯಾಕೆ. ನೀವು ಯಾರನ್ನು ಹಾಗೆ ಕರೆದಿದ್ದೀರಿ ಹೇಳಿ?” ಎಂದು ಪುತ್ತಿಲ ಬೆಂಬಲಿಗರು ಪ್ರಶ್ನಿಸಿದ್ದರು. ಸಂಜೀವ ಮಠಂದೂರು ಸೃಷ್ಟೀಕರಣ ಕೊಡದೆ ಹೊರಟಾಗ ಪುತ್ತಿಲ ಬೆಂಬಲಿಗರು ಗದ್ದಲ ಮಾಡಿದ್ದು, ಸ್ಥಳೀಯ ಬಿಜೆಪಿ ನಾಯಕರು ಪುತ್ತಿಲ ಕಡೆಯ ಹುಡುಗರನ್ನು ಸಮಾಧಾಣಿಸಲು ಪ್ರಯತ್ನಿಸಿದ್ದಾರೆ. ಅದಾಗ್ಯೂ ಸಮಾಧಾನಗೊಳ್ಳದ ಪುತ್ತಿಲ ಬೆಂಬಲಿಗರು ಸಮಾಧಾನ ಪಡಿಸಲು ಬಂದ ನಾಯಕರ ಮೇಲೆಯೇ ಏರಿ ಹೋದ ಘಟನೆ ನಡೆದಿದೆ.
ಈ ಘಟನೆಯ ಬಳಿಕ ಪುತ್ತಿಲ ತಮ್ಮ ಬೆಂಬಲಿಗರನ್ನು ಅಲ್ಲಿಂದ ಕರೆದೊಯ್ದರಾದರೂ, ಪುತ್ತಿಲ ಕಡೆಯ ಹುಡುಗರು ಹಿರಿಯ ನಾಯಕರಿಗೆ ಅವಮಾನಿಸಿರುವುದು ಬಿಜೆಪಿಯ ಹಿರಿತಲೆಗಳಿಗೆ ನುಂಗಲಾರದ ತುಪ್ಪವಾಗಿದೆ. ಪುತ್ತಿಲರ ವಿರುದ್ಧವೇ ಬಿಜೆಪಿ ಹಿರಿಯ ನಾಯಕರಲ್ಲಿ ಅಸಮಾಧಾನಕ್ಕೆ ಈ ಘಟನೆ ಕಾರಣವಾಗಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವದ ಎದುರು ಪುತ್ತೂರು ಟಿಕೆಟ್ ಗಲಾಟೆಯ ಪ್ರಹಸನಗಳನ್ನು ಮುಂದಿಡಲು ಚರ್ಚೆಗಳು ನಡೆಯುತ್ತಿದೆ.