ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಶುಕ್ರವಾರ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್ ಪ್ರತಿ ಓದುವ ಬದಲು, ಹಿಂದಿನ ವರ್ಷದ ಬಜೆಟ್ ಪ್ರತಿ ಓದಿ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಮೊದಲ 8-10 ನಿಮಿಷಗಳ ಕಾಲ, ಮುಖ್ಯಮಂತ್ರಿ ಅವರು ಹಳೆಯ ಬಜೆಟ್ ಅನ್ನು ಓದುತ್ತಿದ್ದಾರೆಂದು ತಿಳಿದಿರಲಿಲ್ಲ. ತಕ್ಷಣವೇ ಸಚಿವ ಮಹೇಶ್ ಜೋಶಿ ಗೆಹ್ಲೋಟ್ರನ್ನು ಮಧ್ಯದಲ್ಲೇ ತಡೆದರು. ತಕ್ಷಣ ದಿನಾಂಕ ನೋಡಿದ ಸಿಎಂ ಶಾಕ್ ಆಗಿದ್ದಾರೆ, ನಂತರ ಅವರೇ ನಗಲು ಪ್ರಾರಂಭಿಸಿದ್ದಾರೆ.

ಬಜೆಟ್ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಅರ್ಧಗಂಟೆ ಮುಂದೂಡಲಾಯಿತು.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ವೀಡಿಯೋ ಬಿಡುಗಡೆ ಮಾಡಿ, 8 ನಿಮಿಷಗಳ ಕಾಲ ಸಿಎಂ ಹಳೆಯ ಬಜೆಟ್ ಪ್ರತಿಯನ್ನೇ ಓದಿದರು. ಈ ರೀತಿಯ ದೊಡ್ಡ ದಾಖಲೆಯನ್ನು ನಿರ್ಲಕ್ಷ್ಯದಿಂದ ಓದಿರುವ ಸಿಎಂ ಕೈಯಲ್ಲಿ ರಾಜಸ್ಥಾನ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಯಾರಾದರೂ ಊಹಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅನ್ನು ನೇರಪ್ರಸಾರ ಮಾಡಲಾಗುತ್ತಿತ್ತು. ರಾಜ್ಯದ ಜನಸಂಖ್ಯೆಯ ಶೇಕಡಾ 4 ರಷ್ಟಿರುವ ರಾಜ್ಯದ ಯುವಜನರ ಮತವನ್ನು ಗುರಿಯಾಗಿಟ್ಟುಕೊಂಡು ಗೆಹ್ಲೋಟ್ ಸರ್ಕಾರವು ಎಲ್ಲಾ ಕಾಲೇಜುಗಳಿಗೆ ಬಜೆಟ್ ಅನ್ನು ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಿತ್ತು. ಹೀಗಾಗಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.






