ಭದ್ರಾವತಿ: ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದಿಂದ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ತಂದು ಪುನರಾರಂಭ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಬಿಜೆಪಿಯವರು ಈ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹರಿಹಾಯ್ದಿದ್ದಾರೆ.
ಭದ್ರಾವತಿಯಲ್ಲಿ ಪ್ರಜಾಧ್ವನಿ ಸಮಾವೇಶಕ್ಕೂ ಮುನ್ನ ವಿಐಎಸ್ಎಲ್ ಕಾರ್ಮಿಕರ ಜತೆ ಚರ್ಚೆ ಮಾಡಿ ಅವರ ಅಳಲು ಕೇಳಿದ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಗ್ಗೆ ಕಿಡಿಕಾರಿದರು. ಅಲ್ಲದೆ ಈ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಸಂಸದರೂ ಸೇರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಈ ಕಾರ್ಖಾನೆ ಉಳಿಸಲು ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ಈಗ ಈ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು, ಖರೀದಿ ಮಾಡಲು ಯಾರೂ ಬಂದಿಲ್ಲ ಎಂದು ಈಗ ಮುಚ್ಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಉಕ್ಕಿನ ಕಾರ್ಖಾನೆ ಹಾಗೂ ಕಾಗದ ಕಾರ್ಖಾನೆ ಎರಡು ಸರ್ಕಾರದ ಸ್ವಾಮ್ಯದಲ್ಲೇ ಮುಂದುವರಿಯಬೇಕು, ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಖಾಸಗಿಯವರಿಂದ ನಡೆಸಲಾಗುವ ಕಾರ್ಖಾನೆಯನ್ನು ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ? ಅಂದರೆ ನಿಮಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದು ಹರಿಹಾಯ್ದರು.
ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಎಷ್ಟು ಯೋಜನೆ ಜಾರಿಯಾಗಿವೆ ಎಂದು ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಈಶ್ವರಪ್ಪ ಅವರು ಉತ್ತರಿಸಬೇಕು ಎಂದರು.
ಯಡಿಯೂರಪ್ಪ ವಿಫಲರಾದರೂ ಎಂದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ನಾವು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುವುದಾಗಿ ಹೇಳಿದ್ದರು. ಈಗ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದಿದ್ದಾರೆ. ಆ ಮೂಲಕ ಬೊಮ್ಮಾಯಿ ಅವರ ಆಡಳಿತವೂ ವಿಫಲವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನಾಯಕತ್ವ ಇಲ್ಲದ ಬಿಜೆಪಿ ಈಗ ಮೋದಿ ಅವರ ಮುಂದಿಟ್ಟು ಚುನಾವಣೆ ಮಾಡುತ್ತಿದೆ.
ಪಕ್ಷದ ಟಿಕೆಟ್ ವಿಚಾರವಾಗಿ ಕೇಳಿದಾಗ, ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಬೇಕು. ನಮ್ಮ ಪಕ್ಷದ ಪ್ರಕ್ರಿಯೆ ಮೂಲಕ ಟಿಕೆಟ್ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
40% ಕಮಿಷನ್ ನಿಲ್ಲಿಸಿದರೆ ನಮ್ಮ ಯೋಜನೆ ಜಾರಿಗೊಳಿಸಬಹುದು
ಪಕ್ಷದ ಮುಂದಿನ ಘೋಷಣೆಗಳ ಬಗ್ಗೆ ಕೇಳಿದಾಗ, ನಾವು ಈಗಾಗಲೇ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದೇವೆ. ಬಿಜೆಪಿಯವರ 40% ಕಮಿಷನ್ ನಿಲ್ಲಿಸಿದರೆ ನಮ್ಮ ಯೋಜನೆಗಳನ್ನು ಜಾರಿಗೊಳಿಸಬಹುದು. ಇದು ನಮ್ಮ ಸರ್ಕಾರದ ಬದ್ಧತೆ. ಇವರ ಅಕ್ರಮಗಳಿಂದ ದೇಶದಲ್ಲಿ ಕರ್ನಾಟಕಕ್ಕೆ ಕಳಂಕ ಬಂದಿದೆ. ರಾಜ್ಯಕ್ಕೆ ದಕ್ಷ ಆಡಳಿತ ನೀಡಬೇಕು ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಸೀಮಿತ
ಅಕ್ರಮ ಆಸ್ತಿ ವಿಚಾರವಾಗಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ವಿಚಾರವಾಗಿ ದಿನನಿತ್ಯ ನನಗೆ ನೊಟೀಸ್ ನೀಡುತ್ತಿದ್ದಾರೆ. ಅಧಿಕಾರಿಗಳ ಮುಂದೆ ಎಲ್ಲ ಉತ್ತರ ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಉತ್ತರ ನೀಡಿದ್ದೇನೆ. ಆದರೂ 22 ರಂದು ಇಡಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಆಡಳಿತ ಪಕ್ಷದವರು ಎಷ್ಟು ಸಾವಿರ ಕೋಟಿ ಲೂಟಿ ಹೊಡೆದರೂ ಕೇಳುವುದಿಲ್ಲ. ಈ ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಸೀಮಿತ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ಕಾರ್ಖಾನೆ ನೌಕಕರಿಂದ ಕಾರ್ಖಾನೆಯ ಸ್ಥಿತಿಗತಿಗಳ ಬಗ್ಗೆ ಹಾಗೂ ಅವರ ಕಷ್ಟಗಳ ಬಗ್ಗೆ ಮಾಹಿತಿ ಪಡೆದರು.