ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ,90 ಕ್ಕಿಂತ ಹೆಚ್ಚು ಮತದಾನ ಮಾಡಿಸುವ ಮೂಲಕ ರಾಜ್ಯದಲ್ಲಿಯೇ ನಂ.1 ಸ್ಥಾನಕ್ಕೇರಲು ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪೂರ್ವ ಸಿದ್ದತೆಗಳು ಹಾಗೂ ಸ್ವೀಪ್ ಸಮಿತಿ ಚಟುವಟಿಕೆಗಳ ಬಗೆಗಿನ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ, ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಬಾಗವಹಿಸಿ ಯಶಸ್ವಿಗೊಳಿಸೋಣ ಎಂದರು.
ಮೈಸೂರು ಎಂದರೆ ಪ್ರಜ್ಞಾವಂತರ ನಾಡು, ಕಲೆ, ಸಾಹಿತ್ಯ ಹಾಗೂ ಪ್ರೇಕ್ಷಣೀಯ ಸ್ಥಳಗಳ ಆಗರವಾಗಿರುವ ಮೈಸೂರು ತನ್ನದೇ ಆದ ವಿಶೇಷತೆಗಳನ್ನೊಂದಿದ್ದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ಮಾಡುವ ಮೂಲಕ ಮಾದರಿ ಜಿಲ್ಲೆಯನ್ನಾಗಿಸಲು ಎಲ್ಲಾ ಅಧಿಕಾರಿ ನೌಕರರು ಕಾರ್ಯೋನ್ಮುಖರಾಗಬೇಕೆಂಧರು.
ಈಗಾಗಲೇ ಜಿಲ್ಲೆಯಲ್ಲಿ ಸ್ವೀಪ್ ಮುಖಾಂತರ ಮತದಾನ ಜಾಗೃತಿ ಕಾರ್ಯಕ್ರಮಗಳು ಆರಂಭಗೊಂಡಿದ್ದು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ, ವಿವಿಧ ವರ್ಗಗಳ ಮತದಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ, ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು,ಹೆಚ್.ಐ.ವಿ ಪೀಡಿತರು, ವಿಕಲಚೇತನರು ಮುಂತಾದ ವರ್ಗಗಳನ್ನು ತಲುಪುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಮತದಾನ ಜಾಗೃತಿಗಾಗಿ ಸಿದ್ದಪಡಿಸಿರುವ ಧ್ಯೇಯಗೀತೆ ನಮ್ಮ ಭಾರತ ಹಾಡು ಎಲ್ಲಾ ಕಡೆ ಪ್ರಸಾರವಾಗುವಂತೆ ಹಾಗೂ ನಗರದಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಜಿಂಗಲ್ಸ್ ಗಳ ಪ್ರಸಾರವಾಗಬೇಕೆಂದರು. ಈ ಹಿಂದಿನ ಚುನಾವಣೆಗಳಲ್ಲಿ ಅತಿಹೆಚ್ಚು ಮತದಾನವಾಗಿರುವ ಹಾಗೂ ಅತ್ಯಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಮತ್ತು ಪ್ರದೇಶಗಳನ್ನು ಗುರುತಿಸಿ ಕಾರಣಗಳನ್ನು ಕಂಡುಕೊಂಡು ಈ ಬಾರಿ ಮತದಾನ ಹೆಚ್ಚಳಕ್ಕೆ ಆಗಬೇಕಿರುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿವಿಧ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಬೇಕು, ಬೀದಿನಾಟಕ, ಚರ್ಚಾಸ್ಪರ್ಧೆ,ಕರಪತ್ರ, ಭಿತ್ತಿಪತ್ರ,ಬ್ಯಾನರ್, ಹೋರ್ಡಿಂಗ್ಸ್,ಅಣಕು ಪ್ರದರ್ಶನ ಮುಂತಾದವುಗಳ ಮೂಲಕ ಎಲ್ಲಾವರ್ಗದ ಮತದಾರರನ್ನು ತಲುಪಬೇಕೆಂದರು.
ಜಿಲ್ಲೆಯನ್ನು ಪ್ರತಿನಿಧಿಸುವ ಸೆಲೆಬ್ರೆಟಿಗಳನ್ನು ಗುರುತಿಸಿ ಅವರ ಮುಖಾಂತರ ಮತದಾನಕ್ಕೆ ಪ್ರೇರೇಪಿಸುವಂತಹ ಹೇಳಿಕೆಗಳನ್ನು ಕೊಡಿಸುವುದು, ನರೇಗ ಕೆಲಸಗಳು ನಡೆಯುವ ಕಡೆ ವಿವಿಧ ಕಾರ್ಯಕ್ರಮಗಳನ್ನೆರ್ಡಿಸುವುದು ಗೋಡೆಬರಹಗಳನ್ನು ಬರೆಯಿಸುವುದು ಹೀಗೆ ಹತ್ತು ಹಲವು ವಿಧಗಳಲ್ಲಿ ಮತದಾರರನ್ನು ತಲುಪಬೇಕೆಂದರು.
ಜಿಲ್ಲೆಯಲ್ಲಿ 50 ಸಾವಿರ ಯುವ ಮತದಾರರಿದ್ದು 38 ಸಾವಿರ ಯುವ ಮತದಾರರು ಮಾತ್ರ ನೋಂದಾಯಿಸಿಕೊಂಡಿದ್ದಾರೆ,ಚುನಾವಣೆ ಹೊತ್ತಿಗೆ 20 ಸಾವಿರ ಯುವ ಮತದಾರರು ನೋಂದಾಯಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದ ಪ್ರತಿ ಸರ್ಕಾರಿ ಇಲಾಖೆಗಳಲ್ಲಿಯೂ ಕನಿಷ್ಟ ವಾರಕ್ಕೊಂದು ಕಾರ್ಯಕ್ರಮ ಮಾಡುವ ಮೂಲಕ ಹಾಗೂ ವಾರದ ಸಂತೆ, ಜಾತ್ರೆಗಳಲ್ಲಿ ಪ್ರಚಾರ ಮಾಡುವ ಮೂಲಕ ಮತ ಪ್ರಮಾಣ ಹೆಚ್ಚಿಸಬೇಕೆಂದರು.
ಸಭೆಯಲ್ಲಿ ಜಿ,ಪಂ.ಸಿಇಒ ಗಾಯತ್ರಿ ಅಪರ ಜಿಲ್ಲಾಧಿಕಾರಿ ಕವಿತ ರಾಜರಾಮ್, ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.