ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ʼಸ್ಯಾಂಟ್ರೋ ರವಿʼ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈತನ ಪ್ರಕರಣದ ಆಳ-ಅಗಲ ಹುಡುಕುತ್ತಾ ಹೋದಂತೆಲ್ಲಾ ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಲೇ ಇವೆ.
ಈ ಎಲ್ಲಾ ವಿಚಾರಗಳ ಬೆನ್ನಲ್ಲೇ ಸ್ಯಾಂಟ್ರೋ ರವಿ ರಾಜಕೀಯ ಪಕ್ಷದಲ್ಲಿ ಸಹ ಗುರುತಿಸಿಕೊಂಡಿದ್ದ ಎಂಬ ಮಾಹಿತಿ ಹೊರಬಿದ್ದಿದ್ದು, ಈತ ಬಿಜೆಪಿ ಕಾರ್ಯಕರ್ತ ಎಲ್ಲಾಗಿದೆ. ಮೂರ್ನಾಲ್ಕು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾನೆ ಎನ್ನಲಾಗುತ್ತಿದೆ. ಬಿಜೆಪಿ ಸಂಸದರು, ಶಾಸಕರುಗಳು, ರಾಜಕೀಯ ವ್ಯಕ್ತಿಗಳ ಪರಿಚಯ ಈತನಿಗಿದೆ ಎನ್ನಲಾಗುತ್ತಿದೆ.
ವೇಶ್ಯಾವಾಟಿಕೆಯ ಕಿಂಗ್ ಪಿನ್ ಆಗಿದ್ದ ಈತ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ಎಂಬ ಸಂಗತಿ ಈಗಾಗಲೇ ಬಹಿರಂಗಗೊಂಡಿದೆ. ಈ ಸಂಬಂಧ ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆ ಪೊಲೀಸರೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫೀಡವೀಟ್ ನಲ್ಲಿ ಉಲ್ಲೇಖವಾಗಿದೆ.
ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಈತನೇ 2022ರ ಜನವರಿ 22ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾನೆ. ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪೊಲೀಸರ ಪರಿಚಯ ಮಾಡಿಕೊಂಡ ಈತ, ನಂತರದಲ್ಲಿ ರಾಜಕೀಯ ವ್ಯಕ್ತಿಗಳ ಸಹಾಯದಿಂದ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದೇನೆ. ಆದರೆ ಈತ ವರ್ಗಾವಣೆಯಿಂದ ಯಾವುದೇ ಕಮಿಷನ್ ಪಡೆದಿಲ್ಲ ಎಂಬುದು ಇಂಟ್ರೆಸ್ಟಿಂಗ್ ಸಂಗತಿಯಾಗಿದೆ.
ಹಾಗಾದ್ರೆ ಸ್ಯಾಂಟ್ರೋ ರವಿ ಯಾರನೆಲ್ಲಾ ವರ್ಗಾವಣೆ ಮಾಡಿಸಿದ್ದಾನೆ. ವರ್ಗಾವಣೆ ವಿಚಾರವಾಗಿ ಹಲವು ರಾಜಕೀಯ ನಾಯಕರೊಂದಿಗೆ ಈತ ಸಂಪರ್ಕ ಹೊಂದಿದ್ದ. ಗೃಹ ಸಚಿವರ ಸ್ನೇಹಿತರ ಜೊತೆ ಹೆಚ್ಚು ಒಡನಾಟ ಇಟ್ಟುಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ, ಆ ಮೂಲಕ ತನಗೆ ಬೇಕಾದ ಪೊಲೀಸರನ್ನ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ಪೊಲೀಸರ ವರ್ಗಾವಣೆ ಕುರಿತು ಇಂಚಿಂಚು ಮಾಹಿತಿಯನ್ನ ಸ್ಯಾಂಟ್ರೋ ರವಿ ಬಾಯ್ಬಿಟ್ಟಿದ್ದಾನೆ.
ಸ್ಯಾಂಟ್ರೋ ರವಿ ಕಡೆಯಿಂದ ವರ್ಗಾವಣೆಗೊಂಡ ಪೊಲೀಸರ ಲಿಸ್ಟ್:
ಕರ್ನಾಟಕ ರಾಜ್ಯ ಗುಪ್ತವಾರ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಜಿ.ಕೆ ಸುಬ್ರಮಣ್ಯ – ಸ್ಯಾಂಟ್ರೋ ರವಿ ಮೂಲಕ ಚೆನ್ನರಾಯಪಟ್ಟಣ ಸರ್ಕಲ್ ಪೊಲೀಸ್ ಠಾಣೆಗೆ ವರ್ಗಾ.
ಹಲ್ಗೂರು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಮಳವಳ್ಳಿ ಪೊಲೀಸ್ ಠಾಣೆಗೆ ವರ್ಗಾ.
3 .ದಿನಾಂಕ 19-01-2022 ಬೆಳಗ್ಗೆ 10 ಗಂಟೆಗೆ ರಾಜ್ಯ ಗೃಹ ಸಚಿವರ ಕಚೇರಿಯಲ್ಲಿ ಪಿಎ ಆಗಿ ಕೆಲಸ ಮಾಡಿಕೊಂಡಿರುವ ವಿಕ್ರಮ್ ಜೊತೆ ಸ್ಯಾಂಟ್ರೋ ರವಿ ಒಡನಾಟ.
- ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಕ್ರಮ್ ಗೆ ಸ್ಯಾಂಟ್ರೋ ರವಿ ಮೇಸೆಜ್.
- ದಿನಾಂಕ 21-01-2022 ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಇನ್ಸಪೆಕ್ಟರ್ ರಾಜೇಂದ್ರ ವರ್ಗಾವಣೆ ವಿಚಾರವಾಗಿ ಮೇಸೆಜ್.
- ದಿನಾಂಕ 15-01-2022 ರಾತ್ರಿ 9.44ಕ್ಕೆ ಬಿ.ಬಿ ಗಿರೀಶ್ ಅಶೋಕನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸುವ ವಿಚಾರಕ್ಕೆ ಬಸವರಾಜ್ ಒಡ್ಡಾಳ್ ಗೆ ಸಂದೇಶ.
- ದಿನಾಂಕ 13-01-2022, ಸಂಜೆ 6.35ಕ್ಕೆ ಗೃಹ ಸಚಿವರ ಸ್ನೇಹಿತರಾದ ಶ್ರೀನಾಥ ಮೂಲಕ ಬಿ.ಬಿ ಗಿರೀಶ್ ವರ್ಗಾವಣೆ ವಿಚಾರವಾಗಿ ಗೃಹ ಸಚಿವರ ಮಾತನಾಡಲು ಸಂದೇಶ.
8 .ದಿನಾಂಕ 13-01-2022, ಮಧ್ಯಾಹ್ನ 12.39ಕ್ಕೆ ಪೊಲೀಸ್ ಇನ್ಸಪೆಕ್ಟರ್ ರಾಜೀವ್ ಅವರನ್ನ ಕುಂಬಲಗೊಡು ಪೊಲೀಸ್ ಠಾಣೆಗೆ ವರ್ಗಾವಣೆ ವಿಚಾರವಾಗಿ ಮಾತನಾಡಲು ಸಂದೇಶ. - ದಿನಾಂಕ 11-01-2022, ರಾತ್ರಿ 9.17ಕ್ಕೆ. ಡಿ.ಜಿ ಆಂಡ್ ಐಜಿಪಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಣ್ ಅವರಿಗೆ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನ ವರ್ಗಾವಣೆ ಮಾಡಿಸಲು ಹುದ್ದೆಗಳು ಖಾಲಿ ಇರುವ ಪೊಲೀಸ್ ಠಾಣೆಗಳ ಮಾಹಿತಿ ಪಡೆಯಲು ಸಂದೇಶ.
- ದಿನಾಂಕ 9-01-2022 ರಾತ್ರಿ 8.52ಕ್ಕೆ. ಬಿಡಿಎನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎ.ಎಸ್ ಅಧಿಕಾರಿ ಆನಂದ ಅವರನ್ನ ಮೈಸೂರು ಮುಡಾಗೆ ವರ್ಗಾವಣೆ ಮಾಡಿಸುವ ಬಗ್ಗೆ ಸಂದೇಶ.
- ದಿನಾಂಕ 7-11-2022, ಬೆಳಗ್ಗೆ 9.41ಕ್ಕೆ. ಮೈಸೂರು ಐಜಿಪಿ ಕಛೇರಿಯಲ್ಲಿ ಪಿಎಸ್ ಆಗಿದ್ದ ಮಹೇಶ್ ಅವರಿಗೆ ಹಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ವರ್ಗಾವಣೆ ವಿಚಾರವಾಗಿ ಸಂದೇಶ.
ಪೊಲೀಸರಿಗೆ ದಮ್ಕಿ ಹಾಕಿದ್ದ:
ವರ್ಗಾವಣೆ ದಂಧೆ ಮೂಲಕ ಗೃಹ ಇಲಾಖೆಯಲ್ಲಿ ಕಂಟ್ರೋಲ್ ಹೊಂದಿದ್ದ ಸ್ಯಾಂಟ್ರೋ ರವಿ, ವಿಚಾರಣೆಗೆ ಕರೆದರೆ ಪೊಲೀಸರಿಗೆ ದಮ್ಕಿ ಹಾಕಿದ್ದ ಎನ್ನಲಾಗಿದೆ. ಅಲ್ಲದೇ ನ್ಯಾಯಾಲಯದ ಮುಂದೆ ರಿಟ್ ಅರ್ಜಿ ಸಲ್ಲಿಸಿ ಪೊಲೀಸರಿಗೆ ಕಿರುಕುಳ ಸಹ ನೀಡುತ್ತಿದ್ದ. 21-01-22ರಂದು ಆರ್.ಆರ್ ನಗರ ಪೊಲೀಸ್ ಠಾಣೆಗೆ ಹಾಜರಾಗಿ ಸ್ಯಾಂಟ್ರೋ ರವಿ ಹೇಳಿಕೆ ನೀಡಿದ್ದ. ಈತನ ಹೇಳಿಕೆಯನ್ನ ಅಫಿಡವೀಟ್ ಮಾಡಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನಾನು ಇನ್ನು ಮುಂದೆ ಸರ್ಕಾರಿ ನೌಕರರ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ರೀತಿಯ ಹಣಕಾಸು ವ್ಯವಹಾರ ಮಾಡುವುದಿಲ್ಲ. ರಾಜಕೀಯ ವ್ಯಕ್ತಿಗಳಿಗೆ ಧಕ್ಕೆ ಬರುವಂತಹ ಕೆಲಸ ಮಾಡುವುದಿಲ್ಲವೆಂದು ಪೊಲೀಸರ ಮುಂದೆ ರವಿ ಹೇಳಿಕೆ ನೀಡಿದ್ದ
ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಆರ್‌ಆರ್ ನಗರ ಪೊಲೀಸರು ಸ್ಯಾಂಟ್ರೋ ರವಿ ವಿಷಯದಲ್ಲಿ ರಾಜಕೀಯ ಒತ್ತಡಕ್ಕೆ ಒಳಗಾದರೆ ಎಂಬ ಅನುಮಾನ ಮೂಡುತ್ತದೆ. ನ್ಯಾಯಾಲಯಕ್ಕೆ ಅಫೀಡವೀಟ್ ಸಲ್ಲಿಸಿದ್ದ ಪೊಲೀಸರು ನಂತರದಲ್ಲಿ ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ. ಅಫಿಡವೀಟ್ ಸಲ್ಲಿಸಿದ ಮೇಲೆ ಪ್ರಕರಣವನ್ನ ಏಕೆ ಮುಂದುವರೆಸಲಿಲ್ಲ ಎಂಬುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸ್ಯಾಂಟ್ರೋ ರವಿ ವಿರುದ್ದ 2022ರ ಜನವರಿ 21ರಂದು ಜಗದೀಶ್ ಅವರ ವಿರುದ್ಧ ಆರ್.ಆರ್ ನಗರದ ಇನ್ಸ್ ಪೆಕ್ಟರ್ ಹಾಗೂ ಸಹಾಯಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಸ್ಯಾಂಟ್ರೋ ರವಿ ಶೋಕಿಗಾಗಿ ಮೂರು ನಾಲ್ಕು ಕಾರುಗಳನ್ನ ಇಟ್ಟುಕೊಂಡಿದ್ದಾನೆ. ಹೆಂಡತಿ ಅಡ್ವೋಕೆಟ್ ಎಂದು ಹೇಳಿಕೊಂಡು ರಾಜಕೀಯ ಮುಖಂಡರ ಜೊತೆ ತೆಗೆಸಿರುವ ಫೋಟೊಗಳನ್ನ ತೋರಿಸಿ ಹಲವರಿಗೆ ವಂಚಿಸುತ್ತಿದ್ದ.
2000-2005ರವರೆಗೆ ಮಂಡ್ಯ ಮತ್ತು ಮೈಸೂರು ನಗರದಲ್ಲಿ ಗಣ್ಯರಿಗೆ ಹುಡುಗಿಯರನ್ನ ವೇಶ್ಯಾವಾಟಿಕೆ ದಂಧೆಗೆ ಕರೆತರುವ ವೃತ್ತಿ ಮಾಡಿಕೊಂಡಿದ್ದ. ಸ್ಯಾಂಟ್ರೋ ಅನೈತಿಕ ಚಟುವಟಿಕೆಗಳ ಮೂಲಕ ರಾಜಕೀಯ ಮುಖಂಡರ ಗೌರವಕ್ಕೆ ಧಕ್ಕೆ ತರುತ್ತಿದ್ದು, ಅಕ್ರಮ ದಂಧೆಗಳಿಂದ ಕೋಟ್ಯಾಂತರ ರೂ. ಆಸ್ತಿ ಮಾಡಿರುವ ಈತನನ್ನ ಕರೆಸಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.