ಕೋಲಾರ: ಕೋಲಾರದಿಂದಲೇ ಸಿದ್ದರಾಮಯ್ಯ ಅವರ ರಾಜಕೀಯ ಅಂತ್ಯವಾಗಲಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಭವಿಷ್ಯ ನುಡಿದಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಅಂತ ಎಲ್ಲರನ್ನ ಮುಗಿಸುತ್ತಿದ್ದಾರೆ. ಈ ಹಿಂದೆ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಬಳಿಕ ಸುರೇಶ್ ಪತ್ನಿ ಪದ್ಮಾವತಿ ಸೋಲಿಸಿದ್ದರು. ಇದಾದ ಗುಲ್ಬರ್ಗಾದಲ್ಲಿ ಮಲ್ಲಿಕಾರ್ಜುನ ಖರ್ಗೆ, ಮೈಸೂರಲ್ಲಿ ಶ್ರೀನಿವಾಸ ಪ್ರಸಾದ್ ಸೋಲಿಸಿದ್ದು ಸಿದ್ದರಾಮಯ್ಯ ಅವರೆ ಎಂದು ಕಿಡಿಕಾರಿದರು.
ಕೆ.ಎಚ್.ಮುನಿಯಪ್ಪ ಮೈಯಲ್ಲಿ ರಕ್ತ ಹರಿಯುತ್ತಿದ್ದರೆ ಅವರು ಇಂದು ಕಾರ್ಯಕ್ರಮಕ್ಕೆ ಬರಬಾರದಿತ್ತು. ಇನ್ನೂ ಮುಂದೆ ಕೋಲಾರಕ್ಕೆ ರಮೇಶ್ ಕುಮಾರ್ ಡಾನ್ ಆಗಿದ್ದು, ಘಟಬಂಧನ್ ಟೀಂ ಕೆ.ಎಚ್. ಮುನಿಯಪ್ಪ ಅವರನ್ನ ಸೋಲಿಸಿದರು. ಈಗ ಡಿ.ಕೆ.ಶಿವಕುಮಾರ್ ಜೊತೆಗೆ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಒಂದೊಮ್ಮೆ ಡಿ.ಕೆ. ಶಿವಕುಮಾರ್ ಜೈಲಿಗೆ ಹೋದರೆ ರಮೇಶ್ ಕುಮಾರ್ ಸಿಎಂ ಅಭ್ಯರ್ಥಿ ಎಂದರು.
ಇಂದಿನ ಕಾರ್ಯಕ್ರಮಕ್ಕೆ ಐದು ಸಾವಿರ ಜನರನ್ನು ಸೇರಿಸಿ ಎಂದು ನಾನು ಚಾಲೆಂಜ್ ಮಾಡಿದ್ದೆ. ಆದರೆ ಸೇರಲಿಲ್ಲ, ಹೀಗಾಗಿ ಸಿದ್ದರಾಮಯ್ಯ ಚಾಪ್ಟರ್ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದ ಅವರು, ಬಿಜೆಪಿ ಟಿಕೆಟ್ ಕೊಟ್ಟರೆ ನಾನು ಗೆಲ್ಲುತ್ತೇನೆ, ಒಂದು ವೇಳೆ ನನ್ನ ತಮ್ಮನಿಗೆ ಕೊಟ್ಟರು ನಾನು ಕೆಲಸ ಮಾಡುತ್ತೇನೆ ಎಂದರು.