ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಮತ್ತು ಕೊಲೆ ಹಾಗು ಇತರೆ ಘಟನೆಗಳು..
ಬೆಂಗಳೂರಿನಲ್ಲಿ ಸಾಕಷ್ಟು ಪ್ರತಿಷ್ಠಿತ ಕಾಲೆಜುಗಳು ಇವೆ. ಅದರಲ್ಲಿ ಪ್ರೆಸಿಡೆನ್ಸಿ ಕಾಲೇಜು ಕೂಡ ಒಂದು. ಯಲಹಂಕ ವ್ಯಾಪ್ತಿಯ ಈ ಕಾಲೇಜಿನಲ್ಲಿ ಜನವರಿ 2ರಂದು ವಿದ್ಯಾರ್ಥಿನಿಯ ಕೊಲೆ ನಡೆದಿತ್ತು. ಕೋಲಾರ ಮೂಲದ ಲಯಸ್ಮಿತಾ ಎಂಬ ಬಿ-ಟೆಕ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಬೆಂಗಳೂರಿನ ಕಾಲೇಜುಗಳ ಭದ್ರತಾ ಪರಿಸ್ಥಿತಿಯನ್ನು ಅಣಕಿಸುವಂತಿತ್ತು. ಪ್ರೆಸಿಡೆನ್ಸಿ ಕಾಲೇಜಿನವರು ಇಲ್ಲೀವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ, ಸರ್ಕಾರ ಈ ಘಟನೆ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸತ್ತ ಮಗಳ ಹೆಣ ಸುಟ್ಟು ಹಾಕಿರುವ ಪೋಷಕರು ಕಾಲೇಜು ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ತನಿಖೆ ಮಾಡಬೇಕಿದ್ದ ಪೊಲೀಸರು ಕಾಲೇಜು ಆಡಳಿತ ಮಂಡಳಿಯನ್ನು ಪ್ರಶ್ನೆ ಮಾಡುವ ಧೈರ್ಯವನ್ನೇ ತೋರಿಸುತ್ತಿಲ್ಲ ಅನ್ನೋದು ವಿಪರ್ಯಾಸ. ಅಷ್ಟಕ್ಕೂ ಈ ಘಟನೆಯ ಬೆನ್ನು ಹತ್ತಿದ್ದ ಪ್ರತಿಧ್ವನಿಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹೈಟೆಕ್ ವಿದ್ಯಾಭ್ಯಾಸ ಜೊತೆಗೆ ಒಂದಿಷ್ಟು ಗಾಂಜಾ ಮತ್ತು..!
ಪ್ರೆಸಿಡೆನ್ಸಿ ಅಟಾನಮಸ್ ಕಾಲೇಜು ವಿದ್ಯಾಭ್ಯಾಸದಲ್ಲಿ ಮುಂದಿದೆ ಹಾಗು ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತದೆ ಎನ್ನುವ ಕಾರಣಕ್ಕೆ ಮಕ್ಕಳನ್ನು ಪ್ರಸೆಡೆನ್ಸಿ ಕಾಲೇಜು ಕಡೆಗೆ ಕಳಿಸುತ್ತಾರೆ. ಆದರೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು 15 ಸಾವಿರ ಮಕ್ಕಳಿದ್ದು, ಎಲ್ಲರನ್ನು ಪ್ರತ್ಯೇಕವಾಗಿ ತಪಾಸಣೆ ಮಾಡಿ ಒಳಕ್ಕೆ ಬಿಡುವ ವ್ಯವಸ್ಥೆ ಇಲ್ಲ. ಒಂದೆ ಬಾರಿಗೆ ನೂರಾರು ವಿದ್ಯಾರ್ಥಿಗಳು ಬರುವುದರಿಂದ ಭದ್ರತಾ ವಿಭಾಗ ವೈಫಲ್ಯ ಅನುಭವಿಸಿದೆ ಎನ್ನುವ ಆರೋಪ ಎದುರಾಗಿದೆ. ಮಕ್ಕಳನ್ನು ನೋಡಲು ಬರುವ ಪೋಷಕರನ್ನು ಒಳಕ್ಕೆ ಬಿಡುವುದಿಲ್ಲ, ಆದರೆ ವಿದ್ಯಾರ್ಥಿಗಳ ರೀತಿ ಒಳಕ್ಕೆ ಹೋಗುವುದು ಕಷ್ಟವೂ ಅಲ್ಲ. ಇದರ ಜೊತೆಗೆ ಕಾಲೇಜು ಕ್ಯಾಂಪಸ್ನಲ್ಲೇ ಗಾಂಜಾ, ಡ್ರಗ್ಸ್ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತದೆ ಎನ್ನುವುದು ವಿದ್ಯಾರ್ಥಿಗಳ ಆರೋಪವೇ ಆಗಿದೆ. ಆದರೂ ಪೊಲೀಸ್ ಹಾಗು ಸಂಬಂಧಪಟ್ಟ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಗಮನ ಕೊಟ್ಟಿಲ್ಲ ಎನ್ನಲಾಗ್ತಿದೆ.
ಪ್ರೀತಿ ಪ್ರೇಮ ಪ್ರಣಯ ಜೊತೆಗೆ ಗಲಾಟೆ ಮೊದಲೇನಲ್ಲ..!
ಇದೀಗ ಕೊಲೆಯಾಗಿರುವ ವಿದ್ಯಾರ್ಥಿನಿ ಲಯಸ್ಮಿತಾ ಹಾಗು ಕೊಲೆ ಮಾಡಿರುವ ಪವನ್ ಕಲ್ಯಾಣ್ ಇಬ್ಬರು ಪ್ರೇಮಿಗಳು ಎನ್ನುವುದು ಸಾಬೀತಾಗಿದೆ. ಕೊಲೆ ನಡೆಯುವ ಎರಡು ದಿನಗಳ ಹಿಂದಿನಿಂದ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ. ಆದರೆ ಅದಕ್ಕೂ ಮೊದಲು ಸುಮಾರು 2 ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪವನ್ ಕಲ್ಯಾಣ್ ಕೂಡ ನೃಪತುಂಗಾ ಯೂನಿವರ್ಸಿಟಿಯಲ್ಲಿ ಬಿಸಿಎ ಓದುವ ವಿದ್ಯಾರ್ಥಿ ಆಗಿದ್ದು, ದೂರದ ಸಂಬಂಧಿಗಳೂ ಆಗಿರುವ ಕಾರಣ ಇಬ್ಬರ ನಡುವೆ ಸಾಕಷ್ಟು ವಿಚಾರಗಳ ವಿನಿಮಯ ಆಗಿತ್ತು. ಪವನ್ ಕಲ್ಯಾಣ್ ಆಕೆಯ ಹೆಸರನ್ನು ಎದೆ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದ. ಆದರೆ ಕಳೆದ ಒಂದು ತಿಂಗಳ ಹಿಂದೆ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದ ಲಯಸ್ಮಿತಾ, ಪ್ರೇಮವನ್ನು ನಿರ್ಲಕ್ಷ್ಯ ಮಾಡಿದ್ದಳು. ಪವನ್ ಕಲ್ಯಾಣ್ನಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದಳು. ಇದು ಪವನ್ ಕಲ್ಯಾಣ್ಗೆ ಕೋಪವನ್ನು ತರಿಸಿತ್ತು. ಇಬ್ಬರೂ ಸಾಯುವ ನಿರ್ಧಾರ ಮಾಡಿದ್ದ ಪವನ್ ಕಲ್ಯಾಣ್, ಮೊದಲು ಆಕೆಗೆ ಚುಚ್ಚಿ ನಂತರ ತನಗೆ ಇರಿದುಕೊಂಡಿದ್ದ. ಎದೆಗೆ ಇರಿದುಕೊಳ್ಳಲು ನೋವಾಗಿದ್ದರಿಂದ ಕೈ ಕೊಯ್ದುಕೊಂಡಿದ್ದ. ಇದೀಗ ವಿಕ್ಟೋರಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಲಾಟೆಗಳು ಸರ್ವೇ ಸಾಮಾನ್ಯ..!
ಕಳೆದ ಕೆಲವು ದಿನಗಳ ಹಿಂದೆ ಕಾಲೇಜು ಆಡಳಿತ ಮಂಡಳಿ ಹಾಗು ಪ್ರಿನ್ಸಿಪಾಲ್ ಎದುರಲ್ಲೇ ಎರಡು ಗ್ಯಾಂಗ್ಗಳ ನಡುವೆ ಮಾರಾಮಾರಿ ನಡೆದಿತ್ತು. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಮಾರಕಾಸ್ತ್ರಗಳನ್ನು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದರು. ಆದರೆ ಕೇಸ್ ಅನ್ನು ಪ್ರೆಸಿಡೆನ್ಸಿ ಕಾಲೇಜು ಆಡಳಿತ ಮಂಡಳಿ ಮುಚ್ಚಿ ಹಾಕಿತ್ತು. ಅಟಾನಮಸ್ ಕಾಲೇಜು ಆಗಿರುವ ಕಾರಣಕ್ಕೆ ಉನ್ನತ ಶಿಕ್ಷಣ ಸಚಿವರಿಂದ ಪ್ರತಿಯೊಬ್ಬರೂ ಈ ಕಾಲೇಜಿನ ಸಂಪರ್ಕದಲ್ಲಿ ಇರುತ್ತಾರೆ. ಕಾಲೇಜಿನಲ್ಲೇ ಏನೇ ಗಲಾಟೆ ನಡೆದೆರೂ ಸಣ್ಣ ಪುಟ್ಟ ಗಲಾಟೆ ಎನ್ನುವ ಹಾಗೆ ಬಿಂಬಿಸಲಾಗುತ್ತದೆ. ಆ ಬಳಿಕ ಪೊಲೀಸರ ಕೈ ಬೆಚ್ಚಗೆ ಮಾಡಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುತ್ತದೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಒಂದು ಕಾಲೇಜು ಒಳಗೆ ಈ ರೀತಿಯ ಕೊಲೆ ನಡೆಯುತ್ತದೆ ಅಂದರೆ ರಾಜ್ಯದಲ್ಲಿ ಸರ್ಕಾರ ಸತ್ತಿದ್ಯಾ..? ಬದುಕಿದ್ಯಾ..? ಎನ್ನುವ ಪ್ರಶ್ನೆ ಮೂಡುತ್ತದೆ. ಕಾಲೇಜು ಆಡಳಿತ ಮಂಡಳಿ ಭದ್ರತಾ ಲೋಪ ಎದ್ದು ಕಾಣಿಸಿದರೂ ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ತಿಲ್ಲ..? ಅಂದರೆ ದೊಡ್ಡ ದೊಡ್ಡ ಕಾಲೇಜು ಅಂದರೆ ಮಮಕಾರ ಹೆಚ್ಚು ಅಲ್ಲವೇ..?