ಮುರುಘಾ ಮಠದ ಸ್ವಾಮಿಗಳ ಕರ್ಮಕಾಂಡವನ್ನು ಬಯಲಿಗೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಒಡನಾಡಿ ಸೇವಾ ಸಂಸ್ಥೆಯಿಂದ ಮತ್ತೊಂದು ಕರಾಳ ಪ್ರಕರಣದ ಹೊರ ಜಗತ್ತಿಗೆ ಅನಾವರಣಗೊಂಡಿದೆ.
ಮೈಸೂರಿನ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯು ಮಕ್ಕಳು ಹಾಗೂ ಅನ್ಯಾಯಕ್ಕೊಳಗಾಗುವ ಮಹಿಳೆಯರ ಪರವಾಗಿ ಕೆಲಸ ನಿರ್ವಹಿಸುತ್ತಲೇ ಬಂದಿದ್ದು, ಇದೀಗ ಕ್ರಿಮಿನಲ್ ಪ್ರಕರಣ ಬಯಲು ಮಾಡುವಲ್ಲಿ ಮುಂಚೂಣಿಯಲ್ಲಿ ನಿಂತಿದೆ.

ದಲಿತ ಯುವತಿಯನ್ನು ಅತ್ಯಾಚಾರ ಮಾಡಿದ ವ್ಯಕ್ತಿಯ ಬಗ್ಗೆ ಮಾಹಿತಿ ಹೊರ ಹಾಕಿದ್ದು, ಕ್ರಿಮಿನಲ್ ವ್ಯಕ್ತಿಯಿಂದ ಸಾಲು- ಸಾಲು ಅಪರಾಧ ಕೃತ್ಯಗಳು ನಡೆದಿದೆ ಎಂದು ಆರೋಪಿಸಲಾಗಿದೆ.
ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಿಸಲಾಗಿದ್ದು, ದಲಿತ ಹೆಣ್ಣು ಮಗಳನ್ನು ಅತ್ಯಾಚಾರಗೈದಿದ್ದ ಆರೋಪ ಈತನ ಮೇಲಿದೆ. ಅತ್ಯಾಚಾರದ ಬಳಿಕ ಸಂತ್ರಸ್ತೆಯನ್ನೇ ಆತ ಮದುವೆಯಾಗಿದ್ದ. ಅಷ್ಟಕ್ಕೇ ನಿಲ್ಲಿಸದೆ, ಪರ ಪುರುಷರೊಂದಿಗೆ ಪತ್ನಿಯನ್ನೇ ಮಂಚಕ್ಕೆ ಹತ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಅತ್ಯಾಚಾರ, ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯಿದೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, ಉದ್ಯೋಗ ಅರಸಿ ಬಂದಿದ್ದ ಯುವತಿಗೆ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿದ ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರ ಎಸಗಿದ ಬಳಿಕ ಆಕೆಯ ನಗ್ನ ಪೋಟೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದು. ಬ್ಲಾಕ್ ಮೇಲ್ ಗೆ ಹೆದರಿ ಅತ್ಯಾಚಾರಿಯನ್ನೇ ಯುವತಿ ಮದುವೆಯಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ನರಕ ತೋರಿಸಿದ ಕಿರಾತಕ.
ಹಿರಿಯ ಐಎಎಸ್ ಅಧಿಕಾರಿ ಜೊತೆ ಮಂಚ ಹಂಚಿಕೊಳ್ಳುವಂತೆ ಪತ್ನಿಗೆ ಒತ್ತಡ ಹೇರಿದ್ದ ಕಿರಾತಕ, ಒತ್ತಾಯಕ್ಕೆ ಮಣಿಯದಿದ್ದಾಗ ಆಕೆ ಮೇಲೆ ದೈಹಿಕ ಹಲ್ಲೆ ನಡೆಸಿದ್ದ.
ಸ್ಯಾಂಟ್ರೋ ರವಿಗೆ ಪ್ರಭಾವಿ ರಾಜಕಾರಣಿಗಳ ಜೊತೆ ನಂಟು ಇದ್ದು, ಸ್ಯಾಂಟ್ರೋ ರವಿ ಪ್ರಭಾವಕ್ಕೆ ಮಣಿದು ಹೆಣ್ಮಕ್ಕಳ ಮೇಲೆ ರಾಬರಿ ಕೇಸ್ ದಾಖಲಿಸಲಾಗಿತ್ತು. ಪತ್ನಿ ಹಾಗೂ ತಂಗಿ ಇಬ್ಬರನ್ನೂ ರಾಬರಿ ಕೇಸ್ ನಡಿ ಆತ ಜೈಲಿಗೆ ಕಳುಹಿಸಿದ್ದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪತ್ನಿ ಹಾಗೂ ಆಕೆಯ ತಂಗಿ 23 ದಿನ ಕಳೆದಿದ್ದರು.
ರಾಜಕಾರಣಿಗಳ ಪ್ರಭಾವ ಬಳಸಿ ಪೊಲೀಸರು/ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲೂ ಭಾಗಿಯಾಗುತ್ತಿದ್ದ ಎಂಬ ಆರೋಪವೂ ಕೇಳಿ ಬಂದಿದೆ. ವರ್ಗಾವಣೆ ದಂಧೆ ಬಯಲು ಮಾಡಿರೋ ಆಡಿಯೋಗಳು ಕೂಡಾ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ಮೊದಲು ಪಿಂಪ್ ದಂಧೆ ನಡೆಸಿ ಕುಖ್ಯಾತನಾಗಿದ್ದ ಸ್ಯಾಂಟ್ರೋ ರವಿ, ರಾಜಕಾರಣಿಗಳಿಗೆ ಯುವತಿಯರನ್ನು ಸಪ್ಲೈ ಮಾಡುವ ಕಸುಬು ಮಾಡಿಕೊಂಡಿದ್ದ. ಈ ಕೆಲಸದಿಂದಲೇ ಕುಖ್ಯಾತನಾಗಿರುವ ಸ್ಯಾಂಟ್ರೋ ರವಿ ಮೇಲೆ 10 ವರ್ಷಗಳ ಹಿಂದೆಯೇ ವೇಶ್ಯಾವಾಟಿಕೆ ದಂಧೆಯಡಿ ಮೈಸೂರಿನಲ್ಲಿ 10ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿತ್ತು. ಅಲ್ಲದೆ, ಈತನ ಆಟಾಟೋಪಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯಿದೆ ಬಳಕೆ ಮಾಡಲಾಗಿತ್ತು.
ಇದೇ ಕಾಯ್ದೆಯಡಿ ಬಂಧಿಸಿ ಆತನನ್ನು11 ತಿಂಗಳು ಜೈಲಿಗೆ ಅಂದಿನ ಮೈಸೂರು ಪೊಲೀಸ್ ಕಮೀಷನರ್ ಪ್ರವೀಣ್ ಸೂದ್ ಅಟ್ಟಿದ್ದರು. ಸದ್ಯ ಪ್ರವೀಣ್ ಸೂದ್ ಈಗ ಕರ್ನಾಟಕದ ಡಿಜಿ ಮತ್ತು ಐಜಿಯಾಗಿದ್ದು, ಅವರೊಂದಿಗೆ ತನಗೆ ನೇರ ಸಂಪರ್ಕವಿದೆ ಎಂದು ಪೊಲಿಸ್ ಅಧಿಕಾರಿಗಳಿಗೇ ಬಿಲ್ಡಪ್ ಕೊಡುತ್ತಿದ್ದ.
ಹೊರ ಬಿದ್ದಿರೋ ಆಡಿಯೋದಲ್ಲಿ ಎಡಿಜಿಪಿ ಸಲೀಂ ಹೆಸರು ಬಳಕೆಯಾಗಿದ್ದು, ಹೋಮ್ ಮಿನಿಸ್ಟರ್ ಸೇರಿದಂತೆ ಹಲವರ ಜೊತೆ ಫೋಟೋ/ವೀಡಿಯೊ ಮಾಡಿ ಸ್ಟೇಟಸ್ ಹಾಕಿಕೊಳ್ಳೋ ಖಯಾಲಿ ಆತನಿಗಿತ್ತು.
ಅದನ್ನೇ ಬಂಡವಾಳ ಮಾಡಿಕೊಂಡು ಐಎಎಸ್/ಐಪಿಎಸ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದ ರವಿ, ಖುದ್ದು ಮುಖ್ಯಮಂತ್ರಿಯೇ ‘ನನಗೆ ಸರ್ ಅಂತಾ ಕರೀತಾರೆ’…! ಎಂದು ಸುಳ್ಳು ಹೇಳಿ ತಿರುಗುತ್ತಿದ್ದ.
ರವಿಯ ಈ ಎಲ್ಲಾ ಅನ್ಯಾಯಗಳ ವಿರುದ್ಧ ಒಡನಾಡಿ ಸಂಸ್ಥೆಯಿಂದ ಗಂಭೀರ ಆರೋಪ ಹೊರಸಲಾಗಿದ್ದು, ಕೆಲವೇ ವರ್ಷಗಳಲ್ಲಿ ಸ್ಯಾಂಟ್ರೋ ರವಿ ನೂರಾರು ಕೋಟಿ ಅಸ್ತಿ ಸಂಪಾದನೆ ಮಾಡಿದ್ದಾನೆ. ಆತನನ್ನು ಮಟ್ಟ ಹಾಕುವಂತೆ ಒತ್ತಾಯ ಪಡಿಸಿದೆ..