ಬೆಂಗಳೂರು: ಉದ್ಯಮಿ ಪ್ರದೀಪ್ ಅವರ ಸಾವಿಗೆ ಕಾರಣವಾದರ ಮೇಲೆ ಕಾನೂನು ಕ್ರಮಕೈಗೊಳ್ಳುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪ್ರದೀಪ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಅವರು, ಪ್ರದೀಪ್ ಅವರ ಸಾವಿನ ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಯಾರೇ ತಪ್ಪು ಮಾಡಿದ್ದರು ಅವರಿಗೆ ಕಾನೂನಿನ ಪ್ರಕಾರ ಕ್ರಮ ಆಗಬೇಕು. ಇಲ್ಲವಾದಲ್ಲಿ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಅಲ್ಲದೇ ಅರವಿಂದ ಲಿಂಬಾವಳಿ ಈ ಭಾಗದ ಶಾಸಕರಾಗಿದ್ದು ಸೆಟ್ಲಮೆಂಟ್ ಮಾಡಿದ್ದಾರೆ. ಆದರೆ ಡೆತ್ ನೋಟ್ನಲ್ಲಿ ಆರು ಜನರ ಹೆಸರಿದ್ದು, ಲಿಂಬಾವಳಿ ಹೆಸರು ಸಹ ಇದೆ. ಈ ಸಂಬಂಧ ಈಗಾಗಲೇ ಎಫ್ಐಆರ್ ಸಹ ದಾಖಲಾಗಿದ್ದು, ಪೊಲೀಸರು ಕೂಡಲೇ ಎಲ್ಲರನ್ನು ಬಂಧಿಸಬೇಕು ಎಂದರು.
ಈ ನಡುವೆ ಪೊಲೀಸರು ಪ್ರದೀಪ್ ಅವರ ಮನೆಯವರ ಮೊಬೈಲ್ ಕೇಳುತ್ತಿದ್ದು, ಹೀಗೆ ಮಾಡೋದು ಸರಿಯಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಹ ನನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದಿದ್ದರು. ಆದರೆ 3 ತಿಂಗಳಲ್ಲಿ ಬಿ ರಿಪೋರ್ಟ್ ನೀಡಿದರು, ಹೀಗಾಗಿ ಈ ಪ್ರಕರಣದಲ್ಲೂ ಸಹ ಇದೇ ಪರಿಸ್ಥಿತಿ ಆಗಬಾರದು. ಆದ್ದರಿಂದ ಸರ್ಕಾರ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು, ಈ ಸರ್ಕಾರದಲ್ಲಿ ಅನೇಕರು ಸಾಯುವುದು, ದಯಾ ಮರಣ ಕೇಳುವುದು ಸಹಜವಾಗಿದ್ದು, ಇದಕ್ಕೆ ಭ್ರಷ್ಟಾಚಾರ ಕಾರಣ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ, ಪ್ರದೀಪ್ ಕೊಲೆಗೆ ಕಾರಣ ಆದವರಿಗೆ ಸರ್ಕಾರ ಶಿಕ್ಷೆ ಕೊಡಬೇಕು. ಅದು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ಶಿಕ್ಷೆ ಆಗಬೇಕು. ಸಂತೋಷ್ ಪಾಟೀಲ್, ಪ್ರದೀಪ್, ಪ್ರಸಾದ್ ಇವೆಲ್ಲ ಕೇವಲ ಹೆಸರುಗಳಲ್ಲ. ಭ್ರಷ್ಟ ಸರ್ಕಾರದಿಂದ ಆಗುತ್ತಿರುವ ಸಾವುಗಳಾಗಿದ್ದು, 40% ಕಮಿಷನ್ನಿಂದ ಜೀವದ ಮೇಲೆ ಜೀವ ಬಲಿಯಾಗುತ್ತಿದೆ. ಬಿಜೆಪಿ ನಾಯಕರು ಏಕೆ ಹಣಕಾಸಿನ ವ್ಯವಹಾರಗಳಲ್ಲಿ ತಲೆ ಹಾಕ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು, ಪ್ರದೀಪ್ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಎಂದು ದೂರಿದರು.