ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಕರ್ನಾಟಕದ ಜನರನ್ನು ವಂಚಿಸುತ್ತಿದ್ದು, ಕೇವಲ ಚುನಾವಣೆ ಉದ್ದೇಶದಿಂದ ಕೇಂದ್ರ ಜಲ ನಿಗಮವು ಅನುಮತಿ ನೀಡಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಮಹದಾಯಿ ನದಿವಿವಾದ ನ್ಯಾಯಮಂಡಳಿಯಲ್ಲಿ ಕರ್ನಾಟಕದ ಪರ ವಕಾಲತ್ತು ವಹಿಸಿದ್ದ ಬ್ರಿಜೇಶ್ ಕಾಳಪ್ಪ ಹೇಳಿದರು.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿಯವರು ಮಹದಾಯಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದ ಸಿಡಬ್ಲ್ಯೂಸಿ ಅನುಮತಿ ಪತ್ರದಂತೆ ಕಾಣುವ ದಿನಾಂಕವಿಲ್ಲದ ಪತ್ರವೊಂದನ್ನು ಡಿ. 29, 2022ರಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರೆಕಿಸಿಕೊಟ್ಟಿದೆ ಎಂದು ಇಷ್ಟಕ್ಕೇ ಬಿಂಬಿಸುವುದು ಸರಿಯಲ್ಲ. ಈ ಹಿಂದೆ, ಗೋವಾ ವ್ಯಕ್ತಪಡಿಸಿದ್ದ ಆತಂಕವನ್ನು ಪರಿಗಣಿಸಿದ ನಂತರವೂ ಕೇಂದ್ರ ಸರ್ಕಾರವು ಏಪ್ರಿಲ್ 30, 2002ರಂದು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಆಗ ಕೂಡ ಇದೇ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಅಧಿಕಾರದಲ್ಲಿತ್ತು. ಕೇವಲ ಐದು ತಿಂಗಳ ನಂತರ, ಅಂದರೆ ಸೆಪ್ಟೆಂಬರ್ 19, 2002ರಂದು ತಾತ್ವಿಕ ಒಪ್ಪಿಗೆಯನ್ನು ಬಿಜೆಪಿ ಸರ್ಕಾರವು ಅಮಾನತಿನಲ್ಲಿ ಇಟ್ಟಿತು. ಕರ್ನಾಟಕಕ್ಕೆ ಬಿಜೆಪಿ ಮಾಡಿದ್ದ ಈ ದ್ರೋಹವನ್ನು ನಾವು ಮರೆಯಬಾರದು” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಮಹದಾಯಿ ಹೋರಾಟಗಾರರು ಹಾಗೂ ಆಮ್ ಆದ್ಮಿ ಪಾರ್ಟಿ ಮುಖಂಡರಾದ ವಿಕಾಸ್ ಸೊಪ್ಪಿನ್ ಮಾತನಾಡಿ, “ಬಿಜೆಪಿಯು ಈ ವಿಚಾರದಲ್ಲಿ ಬೀಗಬೇಕಾದ ಅಗತ್ಯವಿಲ್ಲ. ಬದಲಾಗಿ, ಈ ಯೋಜನೆಯಿಂದ ಅನುಕೂಲ ಪಡೆಯಬಹುದಾದ ಹುಬ್ಬಳ್ಳಿ-ಧಾರವಾಡ, ನರಗುಂದ, ನವಲಗುಂದ, ಬಾದಾಮಿ, ರೋಣ, ಗದಗ ಹಾಗೂ ಸುಮಾರು 100 ಗ್ರಾಮಗಳಿಗೆ ಶೀಘ್ರವೇ ಕುಡಿಯುವ ನೀರು ಒದಗಿಸಲು ಗಂಭೀರ ಪ್ರಯತ್ನ ಮಾಡಲಿ. ಆಮ್ ಆದ್ಮಿ ಪಾರ್ಟಿಯು ಭಾಷೆ, ಸಂಸ್ಖೃತಿ, ಗಡಿ ಹಾಗೂ ನೀರಿನ ಹಕ್ಕಿಗೆ ಸಂಬಂಧಿಸಿ ರಾಜ್ಯ ಹಿತಾಸಕ್ತಿಗೆ ಸದಾ ಬದ್ಧವಾಗಿದೆ” ಎಂದು ಹೇಳಿದರು.