ಮುಳಬಾಗಿಲು ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾನೇ ಅಭ್ಯರ್ಥಿ, ಇದರಲ್ಲಿ ಡೌಟೇ ಇಲ್ಲ. ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಕಾರಣದಿಂದ ನಾನು ಕೋಲಾರದಲ್ಲಿ ನಿಂತುಕೊಳ್ಳುವುದಿಲ್ಲ. ಮುಳಬಾಗಿಲು ಕ್ಷೇತ್ರದಲ್ಲಿಯೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಆಕಾಂಕ್ಷಿಗಳ ಮತ್ತು ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ನಾನು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ನನ್ನ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸಿದ್ದೇನೆ.ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ. ಕೋಲಾರದಲ್ಲಿ ನಿಮ್ಮ ಸ್ಪರ್ಧೆ ಇದೆಯಾ ಎಂದು ಹಲವರು ಕೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಲಾರಿಗೆ ಬರಲು ನಾನು ಸಹ ವಿನಂತಿಸಿದ್ದೇನೆ. ಹಾಗಾಗಿ ಕೋಲಾರದಲ್ಲಿ ನನ್ನ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಗಳು ಅವರು ಚುನಾವಣೆಗೆ ನಿಲ್ಲುವಾಗ ಸ್ಥಳೀಯರು ಅನ್ನೋ ಪದ ಬಿಡಬೇಕು. ಅವರು ನಮ್ಮ ಸರ್ವೋಚ್ಛ ನಾಯಕರು. ಸ್ಥಳೀಯರಿಗೆ ಅವಕಾಶ ಕೊಡಬೇಕು ಎಂಬ ಪ್ರಸ್ತಾಪ ಮೊದಲಿಗೆ ಮಾಡಿದ್ದು ನಾನೇ. ಆದರೆ ಸಿದ್ದರಾಮಯ್ಯ ಅವರು ಬಂದಾಗ ಇದ್ಯಾವುದನ್ನು ನೋಡುವ ಆಗಿಲ್ಲ. ಈ ಜಿಲ್ಲೆ ಬರಪೀಡಿತ ಮತ್ತು ಬಯಲು ಸೀಮೆ ಜಿಲ್ಲೆ. ಈ ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯರಂತ ನಾಯಕ ಬೇಕು. ಅವರು ಬಂದರೆ ಕೆಸಿವ್ಯಾಲಿ ನೀರನ್ನು ಜಿಲ್ಲೆಯಾದ್ಯಂತ ವಿಸ್ತರಿಸಿ ಎತ್ತಿನ ಹೊಳೆ ಯೋಜನೆಯನ್ನು ಶೀಘ್ರವಾಗಿ ಮುಗಿಸಿ ಜಿಲ್ಲೆಯ ದಾಹ ತೀರಿಸುವ ಕೆಲಸವಾಗುತ್ತದೆ. ಒಟ್ಟಾರೆ ಈ ಜಿಲ್ಲೆ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನವರಿ 9 ನೇ ತಾರೀಖು ಸಿದ್ದರಾಮಯ್ಯ ಅವರು ಕೋಲಾರಿಗೆ ಬರುತ್ತಿದ್ದು ಬಹುತೇಕ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತದೆ. ಮತ್ತು ಸಿದ್ದರಾಮಯ್ಯ ಅವರ ನಿಲುವು ಸಹ ಅಂದೇ ಪ್ರಕಟವಾಗುತ್ತದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದವರು ಕಾಂಗ್ರೇಸಿನಲ್ಲಿ ಎರಡು ಬಣ ಎಂದು ಟೀಕಿಸುತ್ತಾರೆ. ಒಂದು ಮನೆಯಲ್ಲಿ ಗಂಡ ಹೆಂಡತಿ ಬೆಳಿಗ್ಗೆ ಜಗಳವಾಡಿ ಸಂಜೆ ಒಂದಾಗುತ್ತಾರೆ. ನಮ್ಮ ಪಕ್ಷವು ಅಷ್ಟೇ ಎಷ್ಟೇ ಜಗಳವಿದ್ದರು ಹಿರಿಯರ ತೀರ್ಮಾನದಂತೆ ಎಲ್ಲರು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮತ್ತು ಪಕ್ಷದ ಗೆಲುವಿಗಾಗಿ ದುಡಿಯುತ್ತೇವೆ ಎಂದು ಹೇಳಿದ್ದಾರೆ.





