ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ ನೈತಿಕ ಪೊಲೀಸ್ಗಿರಿ, ಅನೈತಿಕ ದಾಳಿ ನಡೆಯುತ್ತಿದೆ.
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ನ ಕಾಟಿಪಳ್ಳ ನಾಲ್ಕನೇ ಬ್ಲಾಕ್ನಲ್ಲಿ ನಿನ್ನೆ ಅಬ್ದುಲ್ ಜಲೀಲ್ ಎಂಬುವವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದರು. ಈ ಘಟನೆ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರಿಂದ ಮಾಜಿ ಸಿಎಂ ಸಿದ್ದರಾಮಯ್ಯದೂರವಾಣಿ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ. ನಾಯಕ ಸಿದ್ದರಾಮಯ್ಯ ಘಟನೆ ಬಗ್ಗೆ ಮಾಹಿತಿ ಪಡೆಯಲು ಮಾಜಿ ಶಾಸಕ ಮೊಯ್ದೀನ್ಗೆ ಕರೆ ಮಾಡಿದ್ದ ಕಮಿಷನರ್ ಅಲ್ಲೇ ಇದ್ದಿದ್ರಿಂದ ಮೊಬೈಲ್ ಕೊಡಲು ಹೇಳಿದ್ರು. ಆಗ ಮೊಯ್ದೀನ್ ಪೊಲೀಸ್ ಕಮಿಷನರ್ ಶಶಿಕುಮಾರ್ಗೆ ಮೊಬೈಲ್ ನೀಡಿದ್ದು ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ.

ಇನ್ನು ಘಟನೆ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿಜವಾದ ಆರೋಪಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಕಳೆದ 2 ತಿಂಗಳಿಂದ ನೈತಿಕ ಪೊಲೀಸ್ಗಿರಿ, ಅನೈತಿಕ ದಾಳಿ ನಡೆಯುತ್ತಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲವೆಂದು ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಕ್ರೋಶ ಹೊರ ಹಾಕಿದ್ದಾರೆ. ಬೇಲೆಬಲ್ ಸೆಕ್ಷನ್ ಹಾಕುವುದರಿಂದ ಬೇಲ್ ಪಡೆದು ಹೊರಬರುತ್ತಾರೆ. ಹೀಗಾಗಿ ಪದೇಪದೆ ಅಂತಹ ಘಟನೆಗಳು ನಡೆಯುತ್ತಿವೆ. ಗೃಹಸಚಿವರ ಜತೆ ನಿನ್ನೆ ಇದೇ ವಿಚಾರದ ಬಗ್ಗೆ ನಾನು ಚರ್ಚೆ ಮಾಡಿದ್ದೆ ಎಂದರು.
ಇನ್ನು ಘಟನೆ ಸಂಬಂಧ ಮಾಜಿ ಶಾಸಕ ಮೊಯ್ದೀನ್ ಬಾವಾ ಪ್ರತಿಕ್ರಿಯೆ ನೀಡಿದ್ದಾರೆ. ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ತಕ್ಕ ಶಿಕ್ಷೆ ಆಗದಿರುವುದರಿಂದ ಮಂಗಳೂರಿನಲ್ಲಿ ಪದೇಪದೆ ಇಂತಹ ಘಟನೆ ಮರುಕಳಿಸುತ್ತಿವೆ. ಗೃಹಸಚಿವರು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇದ್ದಾರೆ. ಗೃಹಸಚಿವರು ಜಿಲ್ಲೆಯಲ್ಲಿ ಇದ್ದಾಗಲೇ ಇಂತಹ ಕೃತ್ಯವೆಸಗಿದ್ದಾರೆ. ಈ ಹಿಂದೆ ಸಿಎಂ ಜಿಲ್ಲೆಯಲ್ಲಿ ಇದ್ದಾಗ ಸುರತ್ಕಲ್ನಲ್ಲಿ ಹತ್ಯೆಯಾಗಿತ್ತು. ಇವರ ಕುಮ್ಮಕ್ಕಿನಿಂದಲೇ ಮಂಗಳೂರಿನಲ್ಲಿ ಹೀಗೆ ನಡೆಯುತ್ತಿದೆ ಎಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಬಳಿ ಮೊಯ್ದೀನ್ ಬಾವಾ ಪ್ರತಿಕ್ರಿಯಿಸಿದರು.











