ಉಳ್ಳಾಲ:ದೇರಳಕಟ್ಟೆಯ ಫ್ಲ್ಯಾಟ್ವೊಂದರಲ್ಲಿ ಸಂಭವಿಸುತ್ತಿದ್ದ ಅಗ್ನಿ ದುರಂತ ಪ್ಲ್ಯಾಟ್ ಮ್ಯಾನೇಜರ್ ಸೂಕ್ತ ಸಮಯಕ್ಕೆ ಗಮನಿಸಿದ ಕಾರಣ ತಪ್ಪಿ ನಿಟ್ಟುಸಿರು ಬಿಡುವಂತಾಗಿದೆ.
ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲ್ಯಾಟ್ನಲ್ಲಿ ಬಿಸಿಯಾಗಿದ್ದ ಇಸ್ತ್ರಿ ಪೆಟ್ಟಿಗೆಯಿಂದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿತ್ತು.
ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದ ದಂತ ವೈದ್ಯಕೀಯ ವಿದ್ಯಾರ್ಥಿನಿಯರಿಬ್ಬರು ಮಂಗಳವಾರ ಬೆಳಗ್ಗೆ ಕಾಲೇಜಿನಲ್ಲಿ ಕಾರ್ಯಾಗಾರವಿದೆಯೆಂದು ಬಟ್ಟೆಗೆ ಇಸ್ತ್ರಿ ಮಾಡಿ ಇಸ್ತ್ರಿ ಹಾಕಿದ ಬಳಿಕ ಸ್ವಿಚ್ ಆಫ್ ಮಾಡಿ ಬಿಸಿಯಾಗಿದ್ದ ಇಸ್ತ್ರಿಪೆಟ್ಟಿಗೆಯನ್ನು ಮಲಗುವ ಹಾಸಿಗೆಯ ಮೇಲೆಯೇ ಇಟ್ಟು ಬೇಗನೇ ಹೋಗಿದ್ದರು.ಇಸ್ತ್ರಿ ಪೆಟ್ಟಿಗೆ ಬಿಸಿ ಇದ್ದ ಕಾರಣ ಹಾಸಿಗೆ ಕರಚಿ ಫ್ಲ್ಯಾಟ್ನಲ್ಲಿ ಹೊಗೆ ಆವರಿಸಿದೆ.
ಹೊಗೆಯ ವಾಸನೆ ಬಂದ ಹಿನ್ನೆಲೆಯಲ್ಲಿ ಫ್ಲ್ಯಾಟ್ ಮ್ಯಾನೇಜರ್, ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಅವರು ಫ್ಲ್ಯಾಟ್ನ ಎಲ್ಲಾ ಕೊಠಡಿಗಳನ್ನು ಹುಡುಕಾಡಿದರು. ಈ ವೇಳೆ ವಿದ್ಯಾರ್ಥಿನಿಯರಿದ್ದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಬಾಗಿಲು ಹಾಕಿದ್ದರಿಂದ ಕೂಡಲೇ ವಿದ್ಯಾರ್ಥಿನಿಯರಿಗೆ ಕರೆ ಮಾಡಿ ತತ್ಕ್ಷಣ ಆಗಮಿಸುವಂತೆ ಹೇಳಿದ್ದರು. ಕೂಡಲೇ ವಿದ್ಯಾರ್ಥಿನಿಯರು ಆಗಮಿಸಿ ಕೊಠಡಿ ಬಾಗಿಲು ತೆರೆದರು.
ಬಳಿಕ ಮ್ಯಾನೇಜರ್ ಶಫೀಕ್ ಕೊಠಡಿಯೊಳಗೆ ತೆರಳಿ ವಾಚ್ ಮ್ಯಾನ್ ಸಹಾಯದಿಂದ ಹಾಸಿಗೆ ಹೊರ ಎಸೆದು ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ.