ಹೊಸದಿಲ್ಲಿ: ಗುಜರಾತ್‌ನಲ್ಲಿ 2027ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಎಪಿ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, 2022ರಲ್ಲಿ ಈಡೇರದ ತಮ್ಮ ಗುರಿಯನ್ನು ಐದು ವರ್ಷಗಳ ಬಳಿಕ ಸಾಧಿಸುವುದಾಗಿ ಹೇಳಿಕೊಂಡಿದ್ದಾರೆ. 10 ವರ್ಷಗಳ ಒಳಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಏಕೈಕ ಪಕ್ಷವೆಂದರೆ ಎಎಪಿ” ಎಂದು ಕೇಜ್ರಿವಾಲ್ ಹೆಮ್ಮೆಯಿಂದ ಹೇಳಿದ್ದಾರೆ.
ಎರಡು ವಾರಗಳ ಹಿಂದೆ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಐದು ಸೀಟುಗಳಲ್ಲಿ ಗೆಲುವು ಕಂಡಿತ್ತು. ಸುಮಾರು ಶೇ 13ರಷ್ಟು ಮತಗಳನ್ನು ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷವೆಂದು ಮಾನ್ಯತೆ ಪಡೆಯುವ ಅರ್ಹತೆ ಗಳಿಸಿತ್ತು. ಆದರೆ ಈ ಚುನಾವಣೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಕೂಡ ಹೀನಾಯ ಪರಾಭವ ಅನುಭವಿಸಿದ್ದರು.
“ಕೈಗಾರಿಕೋದ್ಯಮಿಗಳು ಮತ್ತು ಅತ್ಯಧಿಕ ಸಂಪತ್ತುಳ್ಳ ಜನರು ಭಾರತವನ್ನು ತೊರೆಯುತ್ತಿದ್ದಾರೆ. ಏಕೆಂದರೆ ಅವರಿಗೆ ಕೆಲಸ ಮಾಡಲು ಬಿಜೆಪಿ ಸರ್ಕಾರ ಬಿಡುತ್ತಿಲ್ಲ. ಅವರ ಕಡೆಗೆ ಇಡಿ ಮತ್ತು ಸಿಬಿಐಗಳನ್ನು ಬಿಜೆಪಿ ಕಳಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರದಿಂದ ಉಂಟಾಗಿರುವ ಹಣದುಬ್ಬರ ಮತ್ತು ನಿರುದ್ಯೋಗದ ಸಮಸ್ಯೆಗಳಿಂದ ಜನರು ಹೈರಾಣಾಗಿದ್ದಾರೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ.