ಚಿರತೆ ದಾಳಿಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ಆದರೆ ದಿನದಿಂದ ದಿನಕ್ಕೆ ಚಿರತೆಗಳ ಉಪಟಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯ ವೈಖರಿಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು: ಕಳೆದ ಹಲವು ದಿನಗಳಿಂದ ತಿ.ನರಸೀಪುರ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿರುವ ಚಿರತೆ ಹಾವಳಿ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಕಬ್ಬಿನ ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ನುಗ್ಗಳ್ಳಿಕೊಪ್ಪಲು ಗ್ರಾಮದ ನಿವಾಸಿ ಸತೀಶ್(33) ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಸತೀಶ್ ಗದ್ದೆಗೆ ನೀರು ಬಿಡಲು ತೆರಳಿದ ಸಂದರ್ಭದಲ್ಲಿ ಏಕಾಏಕಿ ಸತೀಶ್ ಅವರ ಮೇಲೆ ದಾಳಿ ನಡೆಸಿದೆ.
ಈ ವೇಳೆ ಚಿರತೆ ದಾಳಿಯಿಂದ ಆತಂಕಗೊಂಡ ಸತೀಶ್, ಚಿರತೆಯಿಂದ ಬಿಡಿಸಿಕೊಂಡು ಗ್ರಾಮದೊಳಗೆ ಓಡಿ ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಚಿರತೆ ದಾಳಿಯಿಂದ ಸತೀಶ್ ಅವರನ್ನ ಪಾರು ಮಾಡಿದ್ದಾರೆ. ಅಲ್ಲದೇ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ಅವರನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಲಿಸಿದ್ದು, ಗಾಯಾಳು ಸತೀಶ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.