ಮೈಸೂರು : ಸತತ 13ವರ್ಷದಿಂದ ಅಂಬಾರಿ ಹೊತ್ತ ‘ಬಲರಾಮ’ನಿಗೆ ಗುಂಡೇಟು ತಗುಲಿ ಗಾಯಗೊಂಡಿದ್ದಾನೆ. ಕಾಡಾನೆ ಎಂದು ಭಾವಿಸಿ ರೈತರೊಬ್ಬರು ಹಾರಿಸಿದ ಗುಂಡು ದಸರಾ ಆನೆಯಾ ಹೊಟ್ಟೆ ಭಾಗಕ್ಕೆ ತಗುಲಿದೆ. ಅದೃಷ್ಟವಶಾತ್ ಬಲರಾಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ ..

ಹುಣಸೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರು ಬಳಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಆರೋಪಿ ಸುರೇಶ್ ನನ್ನು ಬಂಧಿಸಲಾಗಿದ್ದು , ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ

ಗುರುವಾರ ಮೇಯಲು ಬಿಟ್ಟ ಆನೆ ಶಿಬಿರಕ್ಕೆ ಮರಳಿರಲಿಲ್ಲ ಹುಡುಕಿಕೊಂಡು ಹೋದಾಗ ಬಲರಾಮ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ತಕ್ಷಣ ಆನೆಯನ್ನು ಭೀಮನಕಟ್ಟೆ ಶಿಬಿರಕ್ಕೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಂದೂಕು ಬಳಸಿ ಗುಂಡು ಹಾರಿಸಲಾಗಿದ್ದು ಬಲರಾಮನ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿದೆ. ಗುಂಡಿನ ಭಾಗಗಳನ್ನು ದೇಹದಿಂದ ತೆಗೆಯಲಾಗಿದ್ದು ಆತಂಕಪಡುವ ಅಗತ್ಯವಿಲ್ಲ ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಹರ್ಷ ಕುಮಾರ್ ತಿಳಿಸಿದ್ದಾರೆ