ಮಂಡ್ಯ: ಶಂಕಿತ ಉಗ್ರ ಶಾರೀಕ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಾಂಡವಪುರದಲ್ಲಿ ಈ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ಕೆ. ಶಿವಕುಮಾರ್ ತಲೆ ತಿರುಗಿ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ಏನು ಮಾತನಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೇ ಯಾರನ್ನ ಬೆಂಬಲಿಸಿ ಮಾತನಾಡಬೇಕು ಎಂಬುದು ತಿಳಿಯುತ್ತಿಲ್ಲ, ಆದರೆ ಅವರ ಈ ಹೇಳಿಕೆಗಳು ಮುಂದೆ ಅವರಿಗೆ ತಿರುಗುಬಾಣವಾಗುತ್ತೆ ಎಂದು ಕಿಡಿಕಾರಿದರು.
ಡಿಕೆಶಿ ವಿರುದ್ಧ ಸಿಎಂ ಕಿಡಿ
ಇದೇ ವಿಷಯದ ಕುರಿತ ಪಾಂಡವಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ಹೇಳಿಕೆ ಗಮನಿಸಿದರೆ ಕಾಂಗ್ರೆಸ್ ನಿಲ್ಲುವೇನು ಎಂಬುದು ಸ್ಪಷ್ಟವಾಗಬೇಕಿದೆ. ಎಲ್ಲಾ ಭಯೋತ್ಪಾದಕ ಕೃತ್ಯಗಳು ನಡೆದ ಸಂಧರ್ಭದಲ್ಲೂ ಕಾಂಗ್ರೆಸ್ ಇದೇ ರೀತಿ ವರ್ತನೆ ಮಾಡುತ್ತಿದ್ದು, ಇದು ಅವರ ಮನಸ್ಥಿತಿಯಾಗಿದೆ. ಶಂಕಿತ ಉಗ್ರ ಶಾರೀಕ್ ಭಯೋತ್ಪಾದಕನಾಗದೇ ಇದ್ದರೆ NIA ಇದನ್ನು ತನಿಖೆಗೆ ಹೇಗೆ ಸ್ವೀಕರಿಸುತ್ತಿತ್ತು? ಎಂದು ಪ್ರಶ್ನೆ ಮಾಡಿದ ಅವರು, ಸರ್ಕಾರ ನಡೆಸಿದವರಿಗೆ ಇದು ಗೊತ್ತಿರಬೇಕಿತ್ತು. ಅಲ್ಲದೇ ವಿಚಾರ ಡೈವರ್ಟ್ ಮಾಡುವ ಪ್ರಸಂಗ ನಮಗೆ ಬಂದಿಲ್ಲ. ಅವನು ವಿದ್ವಾಂಸಕ ಕೃತ್ಯಕ್ಕೆ ತಯಾರಿಗಿದ್ದ ಎಂಬುದಕ್ಕೆ ಸಾಕ್ಷಿಗಳಿವೆ ಎಂದ ಅವರು, ಭಾರತ-ಚೀನಾ ಗಲಾಟೆ ವಿಷಯದಲ್ಲೂ ನಮ್ಮ ಯೋಧರ ಮನಸ್ಥಿತಿಯನ್ನ ಕುಗ್ಗಿಸುವ ರೀತಿ ಮಾತನಾಡುತ್ತಾರೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.
ಅಲ್ಪಸಂಖ್ಯಾತರ ಓಲೈಕೆ ಯತ್ನ
ಸಚಿವ ಆರ್. ಅಶೋಕ್ ಮಾತನಾಡಿ, ಅಲ್ಪಸಂಖ್ಯಾತರನ್ನ ಓಲೈಸಲು ಡಿ.ಕೆಮ ಶಿವಕುಮಾರ್ ಈ ರೀತಿ ಮಾತನಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ತುಚ್ಚವಾಗಿ ಮಾತನಾಡುವುದು, ದೇಶದ ರಕ್ಷಣೆ ವಿಚಾರವಾಗಿ ರಾಜಕೀಯ ಮಾಡುವುದು ಕಾಂಗ್ರೆಸ್ ಚಾಳಿ. ಇದೀಗ ಈ ಚಾಳಿಯನ್ನೇ ಡಿ.ಕೆ ಶಿವಕುಮಾರ್ ಮುಂದುವರೆಸಿದ್ದಾರೆ. ಈ ಹಿಂದೆ ಹಿಂದೂ ಅನ್ನೊದು ಅಶ್ಲೀಲ ಪದ ಎಂದು ಕಾಂಗ್ರೆಸ್ ಮುಖಂಡರಯ ಹೇಳಿದ್ದರು, ಡಿ.ಕೆ. ಶಿವಕುಮಾರ್ ಹೇಳಿಕೆ ಅದರ ಮುಂದುವರೆದ ಭಾಗ ಎಂದರು.











