ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ಮುಂದುವರೆಸಿರುವ ರಾಜ್ಯ ಬಿಜೆಪಿ ಘಟಕ ಸೋಮವಾರ ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಅವರ ತೋರ್ಪಡಿಕೆಯ “ಅಹಿಂದ” ಹೋರಾಟದ ನಾಟಕದಲ್ಲಿ ಈಗ ದಲಿತರು ಇಲ್ಲ, ಹಿಂದುಳಿದವರೂ ಇಲ್ಲ. ಅವರ ವಕಾಲತ್ತೇನಿದ್ದರೂ ಒಂದು ಸಮುದಾಯದ ಪರ ಮಾತ್ರ. ಹಿಂದುಳಿದ ಹಾಗೂ ದಲಿತ ವರ್ಗಕ್ಕೆ ಸಿದ್ದರಾಮಯ್ಯ ಅವರಿಂದ ಯಾವತ್ತಿಗೂ ಸಿಗುವುದು ಕುತಂತ್ರದ ಒಳ ಏಟು ಮಾತ್ರ ಎಂದು ಆರೋಪಿಸಿದೆ.
ಅಧಿಕಾರ ಇದ್ದಾಗ ಸಿದ್ದರಾಮಯ್ಯ ದಲಿತರ ಯಾವ ಬೇಡಿಕೆನೂ ಈಡೇರಿಸಿಲ್ಲ ಹಾಗೇ ಅವರಿಂದ ತುಳಿತಕ್ಕೆ ಒಳಗಾದ ದಲಿತ ನಾಯಕರ ಪಟ್ಟಿಗೂ ಕೊನೆಯಿಲ್ಲ. √ ಮಲ್ಲಿಕಾರ್ಜುನ ಖರ್ಗೆ √ ಡಾ.ಜಿ.ಪರಮೇಶ್ವರ್ √ ಮೋಟಮ್ಮ √ ಶ್ರೀನಿವಾಸ್ ಪ್ರಸಾದ್ ಅವರ ದಲಿತಪರ ಪ್ರೀತಿ ಯಾವತ್ತಿಗೂ ತೋರ್ಪಡಿಕೆಗೆ ಅಷ್ಟೇ ಎಂದು ಹರಿಹಾಯ್ದಿದೆ.
ಸಿದ್ದರಾಮಯ್ಯನವರು ಐದು ವರ್ಷ ಅಧಿಕಾರದಲ್ಲಿದ್ದಾಗಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದಿದೆ. ಆಗ ವರದಿ ಜಾರಿ ಮಾಡುವ ಬಗ್ಗೆ ಆಲೋಚಿಸದ ಪ್ರತಿಪಕ್ಷದ ನಾಯಕರು, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದೆ.