ರಾಜಕಾರಣದಲ್ಲಿ ಯಾರು ಶತ್ರುಗಳು ಅಲ್ಲ, ಯಾರು ಮಿತ್ರರೂ ಅಲ್ಲ ಅನ್ನೋದು ಜನಜನಿತ ಆಗಿರುವ ಮಾತು. ಇದನ್ನು ನಮ್ಮ ರಾಜ್ಯದ ರಾಜಕಾರಣಿಗಳು ಬಹುತೇಕ ಸಮಯದಲ್ಲಿ ಸಾಬೀತು ಮಾಡಿದ್ದಾರೆ. ರಾಮನಗರದಲ್ಲಿ ಬದ್ಧ ಎದುರಾಳಿಗಳಾಗಿದ್ದ ಡಿ.ಕೆ ಶಿವಕುಮಾರ್ ಹಾಗು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಓಡಾಡಿದ್ದನ್ನು ಈ ಜನರು ನೋಡಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಇಬ್ಬರು ಅಣ್ಣ ತಮ್ಮನ ಹಾಗೆ ಒಟ್ಟೊಟ್ಟಿಗೆ ಪ್ರಚಾರ ಮಾಡಿದ್ದನ್ನು ನೋಡಿದ್ದರು. ಆ ಬಳಿಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದ ಬಳಿಕ ಇಬ್ಬರು ನಾಯಕರು ಪ್ರತ್ಯೇಕ ದಿಕ್ಕುಗಳಿಗೆ ಮುಖ ಮಾಡಿದ್ರು. ಇದೀಗ ಮತ್ತೆ ಜೋಡೆತ್ತುಗಳು ಹಳಿಗೆ ಬರುವ ಮುನ್ಸೂಚನೆ ಸಿಗುತ್ತಿದೆ.
ರಾಜ್ಯದಲ್ಲಿ ಶುರುವಾಗ್ತಿದೆ ಹೊಂದಾಣಿಕೆ ರಾಜಕೀಯ
ರಾಜಕಾರಣಿಗಳು ತಮಗೆ ಬೇಕಾದ ಹಾಗೆ ಒಳಗೊಳಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಗೆಲ್ಲುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ಬಿಜೆಪಿ – ಕಾಂಗ್ರೆಸ್ 2 ಸ್ಥಾನಗಳಿಗೆ ತಲಾ ಒಬ್ಬ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುವ ಮೂಲಕ ಹೊಂದಾಣಿಕೆ ರಾಜಕೀಯ ಮಾಡಿದ್ದರು. ಇನ್ನು ವಿಧಾನಸಭೆ, ಲೋಕಸಭಾ ಕ್ಷೇತ್ರ ಚುನಾವಣೆ ವೇಳೆಯಲ್ಲೂ ಎದುರಾಳಿ ಪಕ್ಷದ ನಾಯಕರನ್ನು ಕಟ್ಟಿ ಹಾಕಲು ಬೇರೊಂದು ಎದುರಾಳಿ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇದೀಗ ರಾಮನಗರ ಜಿಲ್ಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಡಿ.ಕೆ ಶಿವಕುಮಾರ್ ಹಾಗು ಹೆಚ್.ಡಿ ಕುಮಾರಸ್ವಾಮಿ ಪರೋಕ್ಷವಾಗಿ ಹೊಂದಾಣಿಕೆಯ ಮೊರೆ ಹೋಗಿದ್ದಾರೆ ಎನ್ನುವ ರಾಜಕೀಯ ಲೆಕ್ಕಾಚಾರದ ಮಾತುಗಳು ಕ್ಷೇತ್ರದಲ್ಲಿ ಬರುತ್ತಿವೆ.
ಚನ್ನಪಟ್ಟಣದಲ್ಲಿ ಸಿ.ಪಿ ಯೋಗೇಶ್ವರ್ ಕಟ್ಟಿ ಹಾಕಲು ಸ್ಕೆಚ್
ರಾಮನಗರ ಜಿಲ್ಲೆಯ ಎರಡು ಕ್ಷೇತ್ರಗಳಾದ ಚನ್ನಪಟ್ಟಣ ಹಾಗು ಕನಕಪುರ ಕ್ಷೇತ್ರ ಈ ಬಾರಿ ಕಿಚ್ಚಿನ ಪೈಪೋಟಿಗೆ ಸಾಕ್ಷಿಯಾಗುತ್ತಿದೆ. ಕನಕಪುರದಿಂದ ಡಿ.ಕೆ ಶಿವಕುಮಾರ್ ಸ್ಪರ್ಧೆ ಮಾಡುತ್ತಿದ್ದರೆ, ಚನ್ನಪಟ್ಟಣದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಬಿಜೆಪಿಯಿಂದ ಸಿ.ಪಿ ಯೋಗೇಶ್ವರ್ ಎದುರಾಳಿ ಆಗ್ತಿದ್ದಾರೆ. ಇನ್ನು ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಡಿ.ಕೆ ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ಯೋಜನೆ ರೂಪಿಸಿದ್ದಾರೆ. ಇದೀಗ ಹಳೇ ಜೋಡೆತ್ತುಗಳು ಮತ್ತೆ ಕೈ ಜೋಡಿಸಿ ಕೇಸರಿ ಪಾಳಯವನ್ನು ಹಿಂತಿರುಗಿಸುವ ಲೆಕ್ಕಾಚಾರ ಮಾಡಿದ್ದಾರೆ ಎನ್ನಲಾಗಿದೆ. ಕನಕಪುರದಲ್ಲಿ ಡಮ್ಮಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಬೆಂಬಲ ನೀಡುವುದು. ಅದೇ ರೀತಿ ಕನಕಪುರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಡಮ್ಮಿ ಮಾಡಿ ಡಿಕೆಶಿ ಬೆಂಬಲಿಸುವುದು.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮುಂದೆಯೂ ಸಹಾಯ
ಜೆಡಿಎಸ್ ರಥಯಾತ್ರೆ ವೇಳೆ ಜನರ ಬೆಂಬಲ ನೋಡುತ್ತಿದ್ದರೆ ಕಾಂಗ್ರೆಸ್-ಬಿಜೆಪಿಗಿಂತಲೂ ಭಾರೀ ಬೆಂಬಲ ಸಿಗುತ್ತಿದೆ. ಜೆಡಿಎಸ್ಗೆ ಕಾರ್ಯಕರ್ತರ ಕೊರತೆ ಇಲ್ಲ ಎನ್ನುವಂತೆ ಸಾವಿರಾರು ಜನರು ಜೆಡಿಎಸ್ ಸಭೆಗಳಲ್ಲಿ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಜೊತೆಗೆ ಈ ಬಾರಿ ಜೆಡಿಎಸ್ ಕೂಡ ಪಕ್ಕಾ ಪೈಪೋಟಿ ಕೊಡುವುದು ನಿಶ್ಚಿತವಾಗಿದೆ. ಇನ್ನು ರಾಜ್ಯಾದ್ಯಂತ ಡಿ.ಕೆ ಶಿವಕುಮಾರ್ ಹಾಗು ಹೆಚ್.ಡಿ ಕುಮಾರಸ್ವಾಮಿ ಸಂಚಾರ ಮಾಡಬೇಕಿರುವ ಕಾರಣ ಕ್ಷೇತ್ರದ ಕಡೆಗೆ ಹೆಚ್ಚು ಗಮನ ಕೊಡುವುದು ಸಾಧ್ಯವಿಲ್ಲ. ಒಂದು ವೇಳೆ ಅತಂತ್ರ ವಿಧಾನಸಭೆ ಚುನಾವಣೆ ಎದುರಾದರೆ ಮುಂದಿನ ಬಾರಿ ಮೈತ್ರಿ ಸರ್ಕಾರ ಬರಬೇಕಿದ್ದರೆ ಈ ಬೆಳವಣಿಗೆ ಉತ್ತಮ ಅನ್ನೋ ಕಾರಣಕ್ಕೆ ಚುನಾವಣೆಗೂ ಮುನ್ನವೇ ಪರೋಕ್ಷವಾಗಿ ಬೆಂಬಲದ ರಾಜಕೀಯ ಮಾಡುತ್ತಾರೆ ಎನ್ನಲಾಗ್ತಿದೆ. ನಾಯಕರು ಮುಂದೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇದರ ಅಸ್ತಿತ್ವ ನಿರ್ಣಯ ಆಗಲಿದೆ.