ಶಿವಮೊಗ್ಗ: ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಹೀಗಿರುವಾಗ ಪಿಎಫ್ ಐನ ಅಂಗ ಸಂಸ್ಥೆ ಸಿಎಫ್ ಐಗೆ ಸೇರುವಂತೆ ಕಿಡಿಗೇಡಿಗಳು ಗೋಡೆ ಬರಹ ಬರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ನಡೆದಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಶಿರಾಳಕೊಪ್ಪದ ಎಂಟು ಕಡೆಗಳಲ್ಲಿ ಗೋಡೆ ಬರಹ ಬರೆದಿದ್ದು, ಜಾಯಿನ್ ಸಿಎಫ್ ಐ ಎಂದು ಬರೆದಿದ್ದಾರೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರರು ಬಂಧನವಾದ ಬಳಿಕ ಹಾಗೂ ದೇಶದ ವಿವಿಧೆಡೆ ಪಿಎಫ್ ಐ ಸಂಘಟನೆ ದೇಶದ್ರೋಹಿ ಕೆಲಸಗಳಲ್ಲಿ ತೊಡಗಿದೆ ಎಂಬ ಆರೋಪದ ಮೇಲೆ ದೇಶದಲ್ಲಿ ಪಿಎಫ್ ಐ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಹೀಗಿರುವಾಗ ಶಿರಾಳಕೊಪ್ಪ ಪಟ್ಟಣದ ಎಂಟು ಕಡೆಗಳಲ್ಲಿ ಕೆಂಪು ಹಾಗೂ ನೀಲಿ ಬಣ್ಣದ ಸ್ಪ್ರೇ ಪೇಂಟ್ ಗಳನ್ನು ಬಳಕೆ ಮಾಡಿ ಜಾಯಿನ್ ಸಿಎಫ್ ಐ ಎಂದು ಬರೆಯಲಾಗಿದೆ.
ಸರ್ಕಾರ ಈಗಾಗಲೇ ಪಿಎಫ್ ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದ್ದರೂ ಆ ಸಂಘಟನೆ ಬಗ್ಗೆ ಗೋಡೆ ಬರೆದವರ ವಿರುದ್ಧ ಶಿರಾಳಕೊಪ್ಪ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಗೋಡೆ ಬರಹ ಬರೆದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ
ನವೆಂಬರ್ 27ರಂದು ತಡರಾತ್ರಿ ಶಿರಾಳಕೊಪ್ಪದ ಹಳ್ಳೂರು ಕೇರಿ, ಭೋವಿ ಕಾಲನಿ, ಸಣ್ಣ ಬ್ಯಾಣದ ಕೇರಿ, ದೊಡ್ಡ ಬ್ಯಾಣದ ಕೇರಿ, ಹಿರೆಕೆರೂರ ರಸ್ತೆ, ಶಿಕಾರಿಪುರ ರಸ್ತೆಯ ಅಲ್ಲಲ್ಲಿ ಜಾಯಿನ್ ಸಿಎಫ್ ಐ ಎಂದು ಬರೆದಿರುವುದನ್ನು ನವೆಂಬರ್ 28ರ ಬೆಳಗಿನ ಜಾವ ಬೀಟ್ ಪೊಲೀಸರು ಗಮನಿಸಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಳಿಕ ಗೋಡೆ ಬರಹಗಳಿಗೆ ಬಣ್ಣ ಬಳಿದು ಅಳಿಸಿಹಾಕಿದ್ದಾರೆ. ಜೊತೆಗೆ ನಿಷೇಧಿತ ಸಂಘಟನೆ ಸೇರುವಂತೆ ಗೋಡೆ ಬರಹ ಬರೆದ ಕಿಡಿಗೇಡಿಗಳ ಬಂಧನಕ್ಕೆ ಬಲೆಯನ್ನು ಬೀಸಿದ್ದು, ಈ ಬಗ್ಗೆ ಕುಲಂಕಷ ತನಿಖೆ ಆರಂಭಿಸಿದ್ದಾರೆ.
ಈ ಬರಹಗಳು ಹಿಂದಿನವಾ ಅಥವಾ ನಿಷೇಧ ಆದಮೇಲೆ ಬರೆದಿದ್ದಾ ಅನುಮಾನಗಳಿವೆ.
ಶಿವಮೊಗ್ಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.