ಈ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಜೈ ಶ್ರೀರಾಮ್ ಎಂದು ಕೂಗಿ, ಮೇಜು ಕುಟ್ಟಿ, ಗೋಮಾತೆ ಪೂಜೆ ಮಾಡಿ ಜಾರಿಗೆ ತಂದರು.
ಈ ಕಾಯ್ದೆಯಿಂದ ರಾಜ್ಯಕ್ಕೆ, ರೈತರಿಗೆ, ಕಾರ್ಮಿಕರಿಗೆ, ಕೈಗಾರಿಕೆಗಳಿಗೆ ಎಷ್ಟು ಲಾಭವಾಯಿತು ಎಂದು ಯಾರಾದರೂ ಪರಿಶೀಲನೆ ಮಾಡಿದ್ದಾರಾ? ಸಿಎಂ ಹಾಗೂ ಪಶು ಸಂಗೋಪನಾ ಸಚಿವರು ಇದನ್ನು ಕ್ರಾಂತಿಕಾರಿ ಕಾಯ್ದೆ, ಗುಜರಾತ್ ಮಾಡೆಲ್ ಎಂದರು. ಆದರೆ ಈ ಕಾನೂನು ಯಾವ ದುಸ್ಥಿತಿಯಲ್ಲಿ ಇದೆ ಎಂಬ ಕನಿಷ್ಠ ಪ್ರಜ್ಞೆ ಇವರಿಗೆ ಇದೆಯೇ? ಈ ಕಾನೂನು ರೈತರು, ಚರ್ಮ ಉದ್ಯಮ ಕಾರ್ಮಿಕರು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ದೊಡ್ಡ ಪೆಟ್ಟು ಬಿದ್ದಿದೆ.
ಮಂತ್ರಿಗಳು ಕ್ಯಾಬಿನೆಟ್ ಸಭೆಯ ಅಂಶಗಳನ್ನು ಸರಿಯಾಗಿ ಓದುವುದಿಲ್ಲ ಎಂದು ಕಾಣಿಸುತ್ತದೆ. ಹಣಕಾಸು ಇಲಾಖೆಯು ರಾಜ್ಯದ ಮೇಲೆ ಈ ಒತ್ತಡವನ್ನು ಹೇರಬೇಡಿ ಎಂದು ಹೇಳಿದೆ. ಇದರಿಂದ ರಾಜ್ಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಬಿಜೆಪಿ ನಾಯಕರು ರಾಜ್ಯದ ಆರ್ಥಿಕ ಪರಿಸ್ಥಿತಿ, ಕಾರ್ಮಿಕರು, ರೈತರು ಹಾಗೂ ಕೈಗಾರಿಕೆಗಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅವರಿಗೆ ಈ ಕಾಯ್ದೆ ಜಾರಿಗೆ ತರಬೇಕು, ಕೇಶವ ಕೃಪದಿಂದ ಬೆನ್ನು ತಟ್ಟಿಸಿಕೊಳ್ಳುವುದಷ್ಟೇ ಮುಖ್ಯವಾಗಿದೆ. ಸರ್ಕಾರದಲ್ಲಿ ಇರೋರಿಗೆ ಈ ಕಾಯ್ದೆಯ ಉದ್ದೇಶ ಏನಿದೆ ಎಂದು ಗೊತ್ತಿಲ್ಲ. ಈ ಕಾಯ್ದೆ ಬಂದ ನಂತರ ರೈತರಿಗೆ ಮಾರಕವಾಗಿದೆ. ಇಡೀ ವಿಶ್ವದಲ್ಲಿ ಶೇಕಡ 13ರಷ್ಟು ಚರ್ಮ ಉತ್ಪನ್ನಗಳು ಭಾರತದಿಂದ ಉತ್ಪಾದನೆ ಆಗುತ್ತಿದ್ದವು. ಕೋವಿಡ್ ಗೂ ಮುನ್ನ ದೇಶದ ಚರ್ಮ ವ್ಯಾಪಾರ ಉದ್ಯಮ 5.5 ಬಿಲಿಯನ್ ಡಾಲರ್ ಗಳಷ್ಟಿತ್ತು. ಚರ್ಮ ಹಾಗೂ ಪಾದರಕ್ಷೆ ಉತ್ಪಾದನೆ ಕ್ಷೇತ್ರದಲ್ಲಿ ಭಾರತ ಎರಡನೇ ಸ್ಥಾನದಲ್ಲಿತ್ತು. ಶೇಕಡಾ 9 ರಷ್ಟು ಪಾದರಕ್ಷೆಗಳು ಭಾರತದಲ್ಲಿ ತಯಾರಾಗುತ್ತಿದ್ದವು.
ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ರಾಜ್ಯ ಹಣಕಾಸು ಸಮೀಕ್ಷೆ ಪ್ರಕಾರ, ರಾಜ್ಯದ ಚರ್ಮ ಉತ್ಪನ್ನ ರಫ್ತು 2017-18 ರಲ್ಲಿ 521.81 ಕೋಟಿಯಷ್ಟು ಇತ್ತು. 2018-19 562 ಕೋಟಿ, 2019-20ಯಲ್ಲಿ 502 ಕೋಟಿ, 2020-21 ಸಾಲಿನಲ್ಲಿ 160.84 ಕ್ಕೆ ಕುಸಿದಿದೆ. ಇದ್ಯಾವುದು ಕಾಂಗ್ರೆಸ್ ಮಾಹಿತಿ ಅಲ್ಲ. ರಾಜ್ಯ ಸರ್ಕಾರದ ಪ್ರಕಾರ, ಚರ್ಮಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಹೆಚ್ಚಿನ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿದ್ದಾರೆ. ಈ ಉದ್ಯಮದಲ್ಲಿ 3.5 ಲಕ್ಷ ನೊಂದಾಯಿತ ಕಾರ್ಮಿಕರಿದ್ದಾರೆ. 91 ಕೈಗಾರಿಕೆಗಳು ರಾಜ್ಯದಲ್ಲಿದ್ದು ಇವುಗಳಲ್ಲಿ ಬಹುತೇಕ ಬಂದಾಗುವ ಹಂತಕ್ಕೆ ಬಂದಿವೆ. ಎಲ್ಲಾ ಕಾರ್ಮಿಕರು ಬೀದಿಗೆ ಬಂದಿದ್ದು ಈ ಬಗ್ಗೆ ಸರ್ಕಾರ ಯಾವುದಾದರೂ ಕ್ರಮ ಕೈಗೊಂಡಿದೆಯೇ? ಒಂದಾದರೂ ಯೋಜನೆ ರೂಪಿಸಿದೆಯೇ? ಇವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆಯೇ? ಆದರೂ ಈ ಕಾಯ್ದೆ ಜಾರಿಯನ್ನು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ?
ಸಂಪುಟ ಸಭೆ ಹೇಳಿಕೆ ಪ್ರಕಾರ, ಆರ್ಥಿಕ ಇಲಾಖೆಯು ಸರ್ಕಾರದ ಈ ನಿರ್ಧಾರದ ಹಿಂದೆ ಹಣಕಾಸಿನ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪರದಾಡುತ್ತಿರುವ ಸಮಯದಲ್ಲಿ ಇಂತಹ ಆರ್ಥಿಕ ಸಂಕಷ್ಟಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ. ಮುಂದಿನ ಎರಡು ವರ್ಷಗಳ ಕಾಲ ರಾಜ್ಯದ ಬಜೆಟ್ ಗಾತ್ರ ಕಡಿಮೆ ಆಗಲಿರುವ ಹಿನ್ನೆಲೆಯಲ್ಲಿ ಸಂಪುಟ ಸಭೆಯ ನಿರ್ಧಾರವನ್ನು ತಡೆ ಹಿಡಿಯುವ ಬಗ್ಗೆ ಆಲೋಚನೆ ನಡೆಸಬೇಕು ಎಂದು ವಿವರಿಸಿತ್ತು. ರಾಜ್ಯ ಹಣಕಾಸು ಇಲಾಖೆ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಮುಖ್ಯಮಂತ್ರಿಗಳು ಮತ್ತು ರಾಜ್ಯದ ಹಣಕಾಸು ವ್ಯವಸ್ಥೆ ಬಹಳ ಅತ್ಯುತ್ತಮವಾಗಿದೆ ಎಂದು ಇತ್ತೀಚಿನ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ತಿಳಿಸಿದ್ದರು.
ಈ ಕಾಯ್ದೆಯಿಂದ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದ್ದು, ಮೊದಲ ವರ್ಷ ರಾಜ್ಯದಲ್ಲಿ 1,71,672 ಜಾನುವಾರು ನಿರ್ವಹಣೆಗೆ 464.17 ಕೋಟಿ, ಎರಡನೇ ವರ್ಷಕ್ಕೆ 3,05,337 ಜಾನುವಾರುಗಳ ನಿರ್ವಹಣೆಗೆ 170.13 ಕೋಟಿ, ಮೂರನೇ ವರ್ಷಕ್ಕೆ 4,04,269 ಜಾನುವಾರು ನಿರ್ವಹಣೆಗೆ 1032.90 ಕೋಟಿ, ನಾಲ್ಕನೇ ವರ್ಷಕ್ಕೆ 4,73,415 ಜಾನುವಾರು ನಿರ್ವಹಣೆಗೆ 1200.12 ಕೋಟಿ ಹಣ ಬೇಕಾಗುತ್ತದೆ. ಇದು ಕೇವಲ ಮೇವಿನ ಖರ್ಚು. ಇವರು ಪ್ರತಿ ಜಾನುವಾರಿನ ಮೇವಿಗೆ 70 ರೂ. ನಿಗದಿ ಮಾಡಿದ್ದಾರೆ. ಆದರೆ 150 ರೂ.ಗಿಂತ ಕಡಿಮೆ ಮೊತ್ತಕ್ಕೆ ಮೇವು ಸಿಗುತ್ತಿಲ್ಲ. ಒಟ್ಟು ಇವರು ಗೋಶಾಲೆಗಳಲ್ಲಿ ಜಾನುವಾರು ಸಾಕಲು 3512.32 ಕೋಟಿ ಬೇಕು. ಗೋಶಾಲೆ ಮೂಲಭೂತ ಸೌಕರ್ಯಕ್ಕಾಗಿ 1208.50 ಕೋಟಿ ಬೇಕು.
ಗೋ ಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯದಲ್ಲಿ 27,250 ಮೆ. ಟನ್ ಗೋಮಾಂಸ ಉತ್ಪತ್ತಿ ಕಡಿಮೆ ಆಗಲಿದೆ. ಇದನ್ನು ಕುರಿ, ಮೇಕೆ ಮಾಂಸದಿಂದ ಸರದಿಗೊಳಿಸಲು 20+1ರಂತೆ ಘಟಕಗಳನ್ನು 50%ರಷ್ಟು ಸಹಾಯ ಧನ ನೀಡಿ 76,650 ಕುರಿ ಘಟಕಗಳನ್ನು ರೈತರಿಗೆ ನೀಡಬೇಕಿದೆ. ಇದಕ್ಕೆ 519.36 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಿದೆ. ಇಲ್ಲಿಯವರೆಗೂ ಒಂದಾದರೂ ಘಟಕ ತೆಗೆದಿದ್ದೀರಾ?
ಈ ಕಾಯ್ದೆಯಿಂದ 5280 ಕೋಟಿ ನಷ್ಟ ಆಗುತ್ತಿದೆ. ಈ ಇಲಾಖೆ ಬದುಕಿದೆಯಾ ಸತ್ತಿದೆಯಾ ಗೊತ್ತಿಲ್ಲ. ಮಂತ್ರಿಗಳು ಮಾಧ್ಯಮಗಳ ಮುಂದೆ ಗೋವು ಕರುಗಳಿಗೆ ಮುತ್ತು ನೀಡುವುದು ಬಿಟ್ಟು ಬೇರೇನೂ ಮಾಡಿಲ್ಲ. ಈ ಇಲಾಖೆಯಲ್ಲಿ 7363 ಹುದ್ದೆಗಳಿದ್ದು, 5366 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಪರಿಷತ್ ನಲ್ಲಿ ಪ್ರಶ್ನೆ ಕೇಳಿದಾಗ, ಅವರು ಇದಕ್ಕೆ ಹಣಕಾಸು ಇಲಾಖೆ ಅನುಮತಿ ಬೇಕಿದೆ ಎಂದು ಹೇಳುತ್ತಾರೆ. ಆದರೆ ಈ ಕಾಯ್ದೆ ಜಾರಿಗೆ ಈ ಇಲಾಖೆ ಒಪ್ಪಿಗೆ ನೀಡಿರಲಿಲ್ಲ. ಉದ್ಯೋಗ ನೀಡಲು ಮಾತ್ರ ಹಣಕಾಸು ಇಲಾಖೆ ಅನುಮತಿ ಬೇಕಾ?
ಸರ್ಕಾರ 275 ಪಶು ಸಂಜೀವಿನಿ ಆಂಬುಲೆನ್ಸ್ ಖರೀದಿ ಮಾಡಿದ್ದು, ನಮ್ಮ 40% ಸರ್ಕಾರ ಎಷ್ಟು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ ಎಂದರೆ, ಆಂಬುಲೆನ್ಸ್ ಖರೀದಿ ಮಾಡಿ ಅದಕ್ಕೆ ಚಾಲಕರ ನೇಮಕ ಮಾಡಿಲ್ಲ. ಚಾಲಕರು ಇಲ್ಲದ ಮೇಲೆ ಆಂಬುಲೆನ್ಸ್ ಖರೀದಿ ಮಾಡಿದ್ದು ಯಾಕೆ? ಕಮಿಷನ್ ಪಡೆಯಲಾ? ಈ ಸರ್ಕಾರ ಯಾರನ್ನೂ ಬಿಡುವುದಿಲ್ಲ. ಗೋಮಾತೆ ಹೆಸರಲ್ಲೂ ಲೂಟಿ ಮಾಡುತ್ತಿದ್ದಾರೆ. ಗೋಮಾತೆ ಹೆಸರಲ್ಲೂ ಮೋಸ ಮಾಡುತ್ತಿದ್ದಾರೆ. ಗೋಶಾಲೆ ಮೇವು ಪೂರೈಕೆಗೆ ಹಣ ಬಿಡುಗಡೆಗಾಗಿ 8.5% ಕಮಿಷನ್ ನೀಡಬೇಕು ಎಂದು ಹರ್ಷ ಅಸೋಸಿಯೇಟ್ಸ್ 14-04-2 022ರಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ನ್ಯಾಯಾಲಯದ ಆದೇಶ ಇದ್ದರೂ ಅಧಿಕಾರಿಗಳು ಹಣ ನೀಡದೆ 8.5% ಕಮಿಷನ್ ಕೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
5 ಸಾವಿರ ಕೋಟಿ ಭರಿಸಲು ಸರ್ಕಾರಕ್ಕೆ ಆಗುವುದಿಲ್ಲ ಎಂದು ಬಿಜೆಪಿಯವರಿಗೆ ಅರಿವಾದಾಗ ಗೋವುಗಳನ್ನು ದತ್ತು ನೀಡುವ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ಇದರ ಪ್ರಕಾರ ರಾಜ್ಯದ ಜನ ಗೋಶಾಲೆ ಗಳ ಹಸುಗಳ ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಇದುವರೆಗೂ ಅವರ ಪ್ರಕಾರ 6 ಗೋಶಾಲೆ ಆರಂಭ ಮಾಡಿದ್ದು, ನನ್ನ ಪ್ರಕಾರ ಕೇವಲ ಮೂರು ಮಾತ್ರ. ಸಿಎಂ ಹಾಗೂ ಮಂತ್ರಿಗಳ ಕ್ಷೇತ್ರದಲ್ಲಿ ಒಂದೂ ಗೋಶಾಲೆ ಇಲ್ಲ. ಮಂತ್ರಿಗಳ ಕ್ಷೇತ್ರದಲ್ಲಿ 9 ಗೋಶಾಲೆಯಲ್ಲಿ 306 ಗೋವುಗಳಿವೆ. ಇದರಲ್ಲಿ ದತ್ತು ತೆಗೆದುಕೊಂಡಿರುವುದು 10. ಚಿಕ್ಕಬಳ್ಳಾಪುರದಲ್ಲಿ 2 ಗೋಶಾಲೆಯಲ್ಲಿ 4 ಜಾನುವಾರುಗಳಿವೆ. ಧಾರವಾಡ 5 ಗೋಶಾಲೆಯಲ್ಲಿ 22 ಜಾನುವಾರುಗಳಲ್ಲಿ 3 ಮಾತ್ರ ದತ್ತು ಪಡೆಯಲಾಗಿದೆ. ಹಾವೇರಿಯಲ್ಲಿ 2 ಗೋಶಾಲೆ ಇದ್ದು, 108 ಹಸುಗಳ ಪೈಕಿ ಕೇವಲ 4 ದತ್ತು ಪಡೆಯಲಾಗಿದೆ. ಉತ್ತರ ಕನ್ನಡದಲ್ಲಿ 8 ಗೋಶಾಲೆಯಲ್ಲಿ 594 ಜಾನುವಾರು ಪೈಕಿ 6 ಮಾತ್ರ ದತ್ತು ಪಡೆಯಲಾಗಿದೆ. ಮುಖ್ಯಮಂತ್ರಿಗಳಿಗೆ ಗಡವು ನೀಡುವ ಸಂಘಟನೆಗಳು ಎಲ್ಲಿ ಹೋಗಿವೆ? ಜವಾಬ್ದಾರಿ ನಿಭಾಯಿಸುವಾಗ ಓಡಿ ಹೋಗುವುದು ಏಕೆ? ನಮ್ಮ ರಾಜ್ಯದಲ್ಲಿ 177 ಗೋಶಾಲೆಯಲ್ಲಿ 21,207 ಜಾನುವಾರು ಪೈಕಿ ದತ್ತು ಪಡೆಯಲಾದ ಜಾನುವಾರುಗಳು ಕೇವಲ 151 ಜಾನುವಾರು ಮಾತ್ರ. ಇದು ಬಿಜೆಪಿ ನಾಯಕರ ಯೋಗ್ಯತೆ. ಬಿಜೆಪಿ ಶಾಸಕರು ಮಂತ್ರಿಗಳು ಎಲ್ಲಿ ಹೋದರು? ಆರ್ ಎಸ್ ಎಸ್ ನವರು ಗೋಮಾತೆ ಮೇಲೆ ಪ್ರೀತಿ ತೋರುವವರು ಎಲ್ಲಿ ಹೋದರು?
ಪುಣ್ಯಕೋಟಿ ಯೋಜನೆ ಹಾಗೂ ಗೋಶಾಲೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಸರ್ಕಾರ ಹೇಳಿದ 14 ಕಡೆ ಗೋಶಾಲೆ ಇಲ್ಲ ಎಂದು ಹೇಳಿದೆ. ಗೋಶಾಲೆ ಕಾಗದದ ಮೇಲೆ ಇದ್ದಂತೆ ಇದೆ ಎಂದು ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಸಿಎಂ ಅವರು ತಮ್ಮ ಜನ್ಮದಿನದಂದು 11 ಹಸುಗಳನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆ 11 ಹಸುಗಳು ಎಲ್ಲಿದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ತಮ್ಮ ಶಾಸಕರಿಗೆ ಗೋವು ದತ್ತು ಪಡೆಯಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿಎಂ ಮಾತಿಗೆ ಬೆಲೆ ಇಲ್ಲದೇ ಯಾರು ದತ್ತು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಸರ್ಕಾರಿ ನೌಕರರ ಮೇಲೆ ಒತ್ತಡ ಹೇರಿ ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಬೇಕು ಎಂದು ಆದೇಶ ನೀಡುತ್ತಿದ್ದಾರೆ.
ಸರ್ಕಾರಿ ಸಿಬ್ಬಂದಿ ವೇತನದಲ್ಲಿ ಯಾಕೆ ಹಣ ಕಡಿತ ಮಾಡುತ್ತೀರಿ, ಬಿಜೆಪಿ ಶಾಸಕರ ವೇತನದಲ್ಲಿ ಕಡಿತ ಮಾಡಿ. ಬಿಜೆಪಿ ನಾಯಕರಿಗೆ 40% ಕಮಿಷನ್ ಆದಾಯ ಇರುವುದರಿಂದ ಇವರು ತಿಂಗಳ ವೇತನದಲ್ಲಿ 100% ರಷ್ಟು ಮೊತ್ತ ಗೋಶಾಲೆಗೆ ದಾನ ಮಾಡಲಿ. ಈ ಯೋಜನೆ ಯಶಸ್ವಿ ಜಾರಿಗೆ A ವೃಂದದ ಅಧಿಕಾರಿಗಳಿಗೆ ತಿಂಗಳಿಗೆ 11 ಸಾವಿರ, B ವೃಂದದ ಅಧಿಕಾರಿಗಳಿಗೆ ತಿಂಗಳಿಗೆ 4 ಸಾವಿರ, ಸಿ ವೃಂದದ ನೌಕರರಿಗೆ 400 ರೂ. ಹಾಗೂ ಡಿ ವೃಂದದವರಿಗೆ ದೊಡ್ಡ ಮನಸ್ಸು ಮಾಡಿ ವಿನಾಯಿತಿ ನೀಡಲಾಗಿದೆ.
ಕಳೆದ ಆರು ತಿಂಗಳಲ್ಲಿ 20 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ಸೋಂಕು ತಗುಲಿದೆ. ಇದರಲ್ಲಿ 11 ಸಾವಿರ ಜಾನುವಾರು ಸತ್ತಿರುವ ವರದಿ ಆಗಿದೆ. ಇದಕ್ಕೆ ಲಸಿಕೆ ಎಲ್ಲಿದೆ? ಈ ರೋಗದಿಂದ ಹಾಲು ಉತ್ಪಾದನೆಯಲ್ಲಿ 10%-12% ಕುಸಿತ ಆಗಿದೆ. ರಾಜ್ಯದಲ್ಲಿ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಈಗ 90 ಲಕ್ಷ ಲೀಟರ್ ಗೆ ಕುಸಿದಿದೆ. ಪ್ರತಿ ನಿತ್ಯ 4 ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆ ಆಗಿದೆ. ಈ ಮಧ್ಯೆ ಹಾಲಿನ ದರ ಏರಿಕೆ ಮಾಡಲಾಗಿದ್ದು ಇದು ರೈತರಿಗೆ ಸಿಗುತ್ತಿದೆಯೇ?
ಈ ಕಾಯಿಲೆಯಿಂದ ಪೊಲೀಸರು, ತಹಶೀಲ್ದಾರರು, ಸಂಘಟನೆಗಳಿಗೆ ಲಾಭ ಆಗಿದೆ. ಕಾರ್ಮಿಕರು, ಕೈಗಾರಿಕೆ, ರೈತರಿಗೆ ಲಾಭ ಇಲ್ಲ. ಹಾಗಾದರೆ ಈ ಕಾಯ್ದೆ ಜಾರಿಗೆ ತಂದಿದ್ದು ಯಾಕೆ? ನಿಮ್ಮ ಸರ್ಕಾರದ ಅಂಕಿ ಅಂಶ ನೀಡುತ್ತಿದ್ದೇನೆ. ಗೋಹತ್ಯೆ ನಿಷೇಧ ಕಾಯ್ದೆ ರೈತರು ಹಾಗೂ ಗೋಮಾತೆ ಉದ್ಧಾರಕ್ಕೆ ಜಾರಿ ಮಾಡಿಲ್ಲ. ಗೋಮತಕ್ಕಾಗಿ ಜಾರಿ ತಂದಿದ್ದೀರಿ. ಈ ಅಂಕಿ ಅಂಶಗಳು ಈ ಕಾಯ್ದೆ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
2.5 ಲಕ್ಷ ಉದ್ಯೋಗ ಖಾಲಿ ಇದೆ. ಅದನ್ನು ತುಂಬಲು, ಶಾಲೆ ಕಟ್ಟಡ, ಕುಡಿಯುವ ನೀರು ಪೂರೈಕೆ, ಅಂಗನವಾಡಿ ಕಟ್ಟಡ, ಶಾಲೆ ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಾಗ ಸ್ಪೀಕರ್ ಅವರ ಬಳಿ ಒಂದೇ ಉತ್ತರ ಇರುತ್ತದೆ. ಅದು ಹಣಕಾಸು ಆಯೋಗದ ಅನುಮತಿ ಬೇಕು. ಅವರ ಜತೆ ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಸರ್ಕಾರ ಈ ಕಾಯ್ದೆ ಹಿಂಪಡೆದು ರೈತರು, ಕಾರ್ಮಿಕರು ಬದುಕಲು ಬಿಟ್ಟು, ಕರ್ನಾಟಕ ರಾಜ್ಯದ ಸ್ಥಿತಿ ಸುಧಾರಣೆಗೆ ನೀಡಿ ಎಂದು ಒತ್ತಾಯಿಸುತ್ತೇವೆ.
ನಾವು ಈ ವಿಚಾರ ಭಾವನಾತ್ಮಕವಾಗಿ ನೋಡುತ್ತಿಲ್ಲ. ರಾಜ್ಯಕ್ಕೆ ಆರ್ಥಿಕವಾಗಿ ಲಾಭ ಆಗುತ್ತಿದೆಯೇ ಇಲ್ಲವೇ? ಆರ್ಥಿಕ ಪರಿಸ್ಥಿತಿ ನಮ್ಮ ಆದ್ಯತೆ. ಅದು ಸುಧಾರಣೆ ಆದರೆ ಉದ್ಯೋಗ ಸೃಷ್ಟಿ ಆಗುತ್ತದೆ. ಆಗ ಮಾತ್ರ ಸಮೃದ್ಧಿ ಕಾಣಬಹುದು. ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ. ಈ ಕಾಯ್ದೆ ಮುಂದುವರಿಯಲು ಯಾವುದಾದರೂ ಒಂದು ಸೂಕ್ತ ಕಾರಣ ನೀಡಿ. ತರಾತುರಿಯಲ್ಲಿ ಈ ಮಸೂದೆ ಮಂಡಿಸಿದ್ದಾರೆ. ಬೇರೆ ಬಿಲ್ ಪಾಸ್ ಮಾಡುವಾಗ ಇಲ್ಲದ ಕೇಸರಿ ಶಾಲು ಮಸೂದೆ ಮಂಡನೆ ವೇಳೆ ಯಾಕೆ ಇತ್ತು? ಸಚಿವರ ಬಳಿ ಮಸೂದೆ ಪ್ರತಿ ಇರಲಿಲ್ಲ.
ಮತದಾರರ ಮಾಹಿತಿ ಕಳವು ಪ್ರಕರಣ ವಿಜಯಪುರಕ್ಕೆ ವ್ಯಾಪಿಸಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ‘ ನನ್ನ ಪ್ರಕಾರ ಸರ್ಕಾರ ಇದನ್ನು ಬೆಂಗಳೂರಿಗೆ ಸೀಮಿತ ಮಾಡಿಲ್ಲ. ನನ್ನ ಪ್ರಕಾರ, ರಾಮನಗರ, ಮಂಡ್ಯ, ಕಲಬುರ್ಗಿ, ನನ್ನ ಕ್ಷೇತ್ರದಲ್ಲಿ 16 ಸಾವಿರ ಮತ ಕೈಬಿಡಲಾಗಿದ್ದು, ಬ್ಲಾಕ್ ಅಧ್ಯಕ್ಷರ ಹೆಸರೇ ಇಲ್ಲವಾಗಿದೆ. ಫಾರ್ಮ್ 7 ಅನ್ನು ನೀಡುತ್ತಿಲ್ಲ. ಇವರು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ನೀವು ಬಿಬಿಎಂಪಿ ನಕ್ಷೆ ನೋಡಿ. ಖಾಸಗಿ ಸಂಸ್ಥೆಯು ಸರ್ಕಾರದ ಸಹಕಾರ ಇಲ್ಲದೇ ಇಷ್ಟು ಆಳ ಸಮೀಕ್ಷೆ ಮಾಡಲು ಸಾಧ್ಯವೇ ಇಲ್ಲ. ಇದು ಮತದಾರರ ಪಟ್ಟಿಗೆ ಸೀಮಿತಗೊಳಿಸಿಲ್ಲ. ಈ ಸರ್ಕಾರ ನಾಗರೀಕರ ಮೇಲೆ ಕಣ್ಣಿಡುವ ಪ್ರಯತ್ನ ಮಾಡುತ್ತಿದೆ. ನಮ್ಮ ನಾಗರೀಕರ ಸಾಮಾಜಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜತೆ ಜೋಡಿಸಿದರು. ಮೊಬೈಲ್ ಸಂಖ್ಯೆಯೂ ಇದರಲ್ಲಿದೆ. ಇದರಲ್ಲಿ ಸಾಮಾಜಿಕ ಜಾಲತಾಣ ಇರುತ್ತದೆ. ನಿಮ್ಮ ಸಂಖ್ಯೆ ಮೂಲಕ ನಿಮ್ಮ ರಾಜಕೀಯ ಆಸಕ್ತಿ ಯಾರ ಕಡೆ ಇದೆ ಎಂದು ಪರಿಶೀಲನೆ ಮಾಡುತ್ತಾರೆ. ನೀವು ಕಾಂಗ್ರೆಸ್ ನಾಯಕರ ಬಗ್ಗೆ ಆಸಕ್ತಿ ತೋರಿದರೆ ನಿಮ್ಮ ಹೆಸರು ಬಿಡುತ್ತಾರೆ. ಮೋದಿ ಹಾಗೂ ಬಿಜೆಪಿ ಬಗ್ಗೆ ಆಸಕ್ತಿ ತೋರಿದರೆ ನಿಮ್ಮನ್ನು ಉಳಿಸಿಕೊಳ್ಳುತ್ತಾರೆ. ಇದು ಮತದಾರರ ಪಟ್ಟಿಗೆ ಹೊರತಾಗಿ ವಿಸ್ತರಿಸಿದ್ದಾರೆ. ಖಾಸಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಈ ಸರ್ಕಾರ ಹಿಂಪಡೆದಿದ್ದು ಯಾಕೆ? ಇದು ನಾಗರೀಕರ ಮೇಲೆ ಕಣ್ಣು ಇಡುವ ಅಗತ್ಯ ಏನಿದೆ? ನಿಮ್ಮ ಮೇಲೆ 24/7 ಕಣ್ಣಿಡುತ್ತಿದ್ದಾರೆ ‘ ಎಂದು ವಿವರಿಸಿದರು.
ಬಿಜೆಪಿ ನಾಯಕರ ಜತೆ ರೌಡಿ ಶೀಟರ್ ಕಾಣಿಸಿಕೊಂಡ ಬಗ್ಗೆ ಕೇಳಿದಾಗ, ‘ ಇದು ರಾಜ್ಯದಲ್ಲಿ ಮಾತ್ರವಲ್ಲ. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕಳ್ಳರಿಂದ ಚಿಕ್ಕ ಕಳ್ಳರು ಎಲ್ಲರೂ ಬಿಜೆಪಿ ಸೇರುತ್ತಿದ್ದಾರೆ. ದೊಡ್ಡವರಿಗೆ ಸಿಬಿಐ, ಐಟಿ, ಇಡಿ ನೊಟೀಸ್ ಕೊಟ್ಟು ಸೇರಿಸಿಕೊಂಡರೆ, ಇಲ್ಲಿ ವಾಂಟೆಡ್ ಪಟ್ಟಿಯಲ್ಲಿ ಸೇರಿಸಿ ಸೆಳೆಯುತ್ತಿದ್ದಾರೆ. ಇಲ್ಲಿ ಮ್ಯಾಜಿಕ್ ಏನೆಂದರೆ ನೀವು ನಿಮ್ಮ ಪಾಪ ತೊಳೆದುಕೊಳ್ಳಲು ಕಾಶಿ ಯಾತ್ರೆ ಮಾಡಬೇಕಿಲ್ಲ, ಬಿಜೆಪಿ ಶಾಲು ಹಾಕಿಕೊಂಡರೆ ಇಲ್ಲೇ ಎಲ್ಲವೂ ಪರಿಹಾರ ಆಗುತ್ತದೆ. ನೀವು ಏನೇ ಕಾನೂನು ಬಾಹಿರ, ಸಂವಿಧಾನ ಉಲ್ಲಂಘನೆ ಮಾಡಿದರೂ ಬಿಜೆಪಿ ಶಾಲು ಹಾಕಿಕೊಂಡರೆ ನಿಮ್ಮಷ್ಟು ಪರಿಶುದ್ಧ ಬೇರೊಬ್ಬರಿಲ್ಲ. ಸಿಸಿಬಿ ಅಧಿಕಾರಿಗಳ ಕೈಗೆ ಸಿಗದ ರೌಡಿ ಶೀಟರ್ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪಕ್ಕ ಕೂತಿರುತ್ತಾರೆ. ತೇಜಸ್ವಿ ಹಾಗೂ ಬಿಜೆಪಿ ಅವರಿಗೆ ಕೇಳಿದರೆ ಫೈಟರ್, ಸೈಲೆಂಟ್, ವೈಲೆಂಡ್, ಸೈಕಲ್, ಬ್ಲೇಡ್ ಎಲ್ಲಿದ್ದಾರೆ ಎಂದು ಹೇಳುತ್ತಾರೆ. ಸಂಸದರು ಶಾಸಕರು ಒಂದು ಕಾರ್ಯಕ್ರಮಕ್ಕೆ ಹೋಗಬೇಕಾದರೆ ಆಹ್ವಾನ ಇಲ್ಲದೆ ಹೋಗುವುದಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಅತಿಥಿಗಳ ಹೆಸರು ಹಾಕಿರುತ್ತಾರೆ. ಕುದ್ದಾಗಿ ಬಂದು ಕರೆದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಹೋದ ನಂತರ ಪರಸ್ಪರ ಸನ್ಮಾನ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.