ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದ ಕಾಳಿ ಮೂರ್ತಿಗಳ ಧ್ವಂಸ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದ್ದು, ಮೂರ್ತಿಗಳನ್ನು ನಿರ್ಮಿಸಿದ್ದ ಶಿಲ್ಪಿಯೇ ದೇವಿಯ ವಿಗ್ರಹಗಳನ್ನು ಒಡೆದು ಹಾಕಿರುವುದು ಬೆಳಕಿಗೆ ಬಂದಿಎ.
ಅಕ್ಟೋಬರ್ 24 ರಂದು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ನಲ್ಲಿ ಹಲವಾರು ಕಾಳಿ ದೇವಿಯ ವಿಗ್ರಹಗಳು ಧ್ವಂಸಗೊಂಡಿರುವುದು ಕಂಡುಬಂದಿತ್ತು. ಇದು ಸ್ಥಳೀಯ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿತ್ತು.
ಕಾಳಿ ಪೂಜೆಯಂದು ಮುಕಂದಪುರ ಪ್ರದೇಶದಲ್ಲಿನ ಶಿಲ್ಪಿ ಪ್ರಭಾತ್ ಸರ್ದಾರ್ ಅವರ ಮೂರ್ತಿ ನಿರ್ಮಾಣದ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ರಾತ್ರಿ ಅವರ ವರ್ಕ್‌ಶಾಪ್‌ಗೆ ನುಗ್ಗಿ ಹಲವಾರು ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ ಎಂದು ಸರ್ದಾರ್ ಆರೋಪಿಸಿದ್ದರು. ಈ ಸುದ್ದಿ ಸ್ಥಳೀಯರನ್ನು ಕೆರಳಿಸಿದ್ದು, ಪ್ರದೇಶಕ್ಕೆ ಜನ ಜಮಾಯಿಸತೊಡಗುತ್ತಿದ್ದಂತೆ ಉದ್ವಿಗ್ನತೆ ಉಂಟಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್‌ಡಿಪಿಒ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.
ನಂತರ ಪ್ರಕರಣದ ತನಿಖೆಯನ್ನು ಆರಂಭಿಸಿದ ಪೊಲೀಸರು, ಸ್ವತಃ ಶಿಲ್ಪಿಯೇ ಮೂರ್ತಿಗಳನ್ನು ಒಡೆದು ಹಾಕಿದ್ದಾನೆಂಬ ನಿಜಾಂಶವನ್ನು ಪತ್ತೆ ಹಚ್ಚಿದ್ದಾರೆ. ಸಾಕಷ್ಟು ಗ್ರಾಹಕರನ್ನು ಪಡೆಯಲು ಸಾಧ್ಯವಾಗದಾಗ, ಶಿಲ್ಪಿ ಸರ್ದಾರ್ ಅವರೇ ವಿಗ್ರಹಗಳನ್ನು ಒಡೆದು ಹಾಕಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಅಪರಾಧಿಯ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದೆ.
ವಿಚಾರಣೆ ನಡೆಸಿದಾಗ, ಸರ್ದಾರ್ ಗೆ ಕಾಳಿ ಪೂಜೆಗೆ ಮುನ್ನ ತನ್ನ ವಿಗ್ರಹಗಳನ್ನು ಮಾರಾಟ ಸಾಧ್ಯವಿಲ್ಲ ಎಂಬ ಸುದ್ದಿ ಹರಡಿದರೆ ತನ್ನ ಖ್ಯಾತಿ ಹಾಳಾಗುತ್ತದೆ ಎಂಬ ಭಯವಿತ್ತು ಎಂದು ಒಪ್ಪಿಕೊಂಡಿದ್ದಾರೆ. ಇದು ತಮ್ಮ ಭವಿಷ್ಯದ ವ್ಯವಹಾರದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಆತಂಕಗೊಂಡಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅದಕ್ಕಾಗಿ ಅವರು ವಿಗ್ರಹಗಳನ್ನು ಹಾನಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಸರ್ದಾರ್ ಸೇರಿದಂತೆ ಮೂವರನ್ನು ಇಲ್ಲಿಯವರೆಗೆ ಬಂಧಿಸಲಾಗಿದ್ದು, ಯಾವುದೇ ವದಂತಿಗಳಿಗೆ ಜನರು ಗಮನ ಕೊಡಬೇಡಿ ಎಂದು ದಕ್ಷಿಣ 24 ಪರಗಣ ಪೊಲೀಸ್ ವರಿಷ್ಠಾಧಿಕಾರಿ ಧೃತಿಮಾನ್ ಸರ್ಕಾರ್ ಹೇಳಿದ್ದಾರೆ.
| ReplyForward |






