ಬಾಲಿವುಡ್ ನಟ ಆಮಿರ್ ಖಾನ್ ಏನು ಮಾಡಿದರೂ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಆಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರ ಅಭಿನಯದ ಬ್ಯಾಂಕ್ ಜಾಹೀರಾತು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ.
#AamirKhan_Insults_HinduDharma ಎಂದು ಹಿಂದುತ್ವವಾದಿಗಳು ಟ್ವಿಟರಿನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದು, ಆಮಿರ್ ಖಾನ್ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಜಾಹಿರಾತಿನಲ್ಲಿ ಭಾರತೀಯ ಸಂಸ್ಕೃತಿಗಳನ್ನು ಅಗೌರವಿಸಲಾಗಿದೆ ಎಂದು ಜಾಹಿರಾತುದಾರ ಬ್ಯಾಂಕ್ ಹಾಗೂ ನಟ-ನಟಿಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗುತ್ತಿದೆ.
ಬಲಪಂಥೀಯ ಚಿತ್ರ ನಿರ್ದೇಶಕ, ದಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ಬ್ಯಾಂಕ್ ಜಾಹಿರಾತನ್ನು ವಿರೋಧಿಸಿದ್ದು, ಭ್ರಷ್ಟ ಬ್ಯಾಂಕ್ ವ್ಯವಸ್ಥೆಯನ್ನು ಬದಲಿಸಲಿ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನಲ್ಲ ಎಂದು ಕಿಡಿಕಾರಿದ್ದಾರೆ.
ಜಾಹಿರಾತಿನಲ್ಲಿ ಆಮಿರ್ ಖಾನ್ ಮತ್ತು ಕಿಯಾರ ಅಡ್ವಾಣಿ ವಧು-ವರರಾಗಿ ಕಾಣಿಸಿಕೊಂಡಿದ್ದು, ತಮ್ಮ ಮದುವೆಯ ಬಳಿಕ ವಧುವಿನ ಮನೆಗೆ ಬರುವಂತೆ ತೋರಿಸಲಾಗಿದೆ. ಸಾಂಪ್ರದಾಯಿಕ ರೀತಿಗೆ ವಿರುದ್ಧವಾಗಿ ವಧುವಿನ ಮನೆಗೆ ತಲುಪುವುದನ್ನು ಮತ್ತು ವರ (ಆಮಿರ್ ಖಾನ್) ಮನೆಗೆ ಮೊದಲ ಹೆಜ್ಜೆ ಇಟ್ಟು ಪ್ರವೇಶಿಸುವಂತೆ ಜಾಹೀರಾತಿನಲ್ಲಿ ತೋರಿಸಲಾಗಿದೆ. ಇದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ, ಇದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಆಮೀರ್ ಖಾನ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜಾಹೀರಾತುಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಅಮೀರ್ ಖಾನ್ ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಹೀರಾತುಗಳನ್ನು ಮಾಡಬೇಕು ಎಂದು ಹೇಳಿದರು.







