ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘಟನೆಯನ್ನು ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಇಂದು ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ. ಪಿ. ಯೋಗಿಶ್ವರ್ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ.
ಈ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯಗಳು ಏನೇ ಇರಲಿ ಅದನ್ನು ಕಾನೂನಾತ್ಮಕವಾಗಿ ಬಗೆಹರೆಸಿಕೊಳ್ಳಬೇಕು ಮತ್ತು ಯಾರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ವಿಧಾನಪರಿಷತ್ ಸಿ.ಪಿ.ಯೋಗೇಶ್ವರ್ ಶನಿವಾರ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದರು.
ಸ್ಥಳೀಯ ಶಾಸಕರಾದ ಮಾಜಿ ಸಿಎಂ ಹೆಚ್.ಡಿಕುಮಾರಸ್ವಾಮಿ ಅವರನ್ನು ದೂರವಿಟ್ಟು ಕಾರ್ಯಕ್ರಮವನ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯನ್ನ ನಡೆಸಿದ್ದರು.
ಈ ವೇಳೆ ಉದ್ರಿಕ್ತ ಪ್ರತಿಭಟನಕಾರರು ಯೋಗೇಶ್ವರ್ ಕಾರಿಗೆ ಮುತ್ತಿಗೆ ಹಾಕಿ ಕಲ್ಲು ಮತ್ತು ಮೊಟ್ಟೆಯನ್ನು ಎಸೆದು ಆಕ್ರೋಶವನ್ನ ಹೊರಹಾಕಿದ್ದರು. ಈ ವೇಳೆ ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು.