ಮುಂಬೈನ ಜುಹು ಪ್ರದೇಶದಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಸೇರಿದ ಅಕ್ರಮ ಕಟ್ಟಡವನ್ನು ಕೆಡವಲು ಬಾಂಬೆ ಹೈಕೋರ್ಟ್ ಮುಂಬೈ ಪಾಲಿಕೆಗೆ ಆದೇಶಿಸಿದೆ.
ನ್ಯಾಯಮೂರ್ತಿ ಆರ್.ಡಿ. ಧಾನುಕಾ ಮತ್ತು ಕಮಲ್ ಖಾಟಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದ್ದು, ಕೇಂದ್ರ ಸಚಿವ ನಾರಾಯಣ ರಾಣೆ ಕುಟುಂಬ ಒಡೆತನದ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದೆ.
ಅಕ್ರಮ ಕಟ್ಟಡವನ್ನು ಸಕ್ರಮಗೊಳಿಸುವಂತೆ ರಾಣೆ ಒಡೆತನದ ಕಂಪನಿ ಮನವಿ ಸಲ್ಲಿಸಿತ್ತು. ಆದರೆ ಈ ರೀತಿ ಅನುಮತಿ ನೀಡಿದರೆ ಎಲ್ಲಾ ಅಕ್ರಮ ಕಟ್ಟಡಗಳನ್ನೂ ಸಕ್ರಮಗೊಳಿಸಬೇಕಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಚಿವ ನಾರಾಯಣ ರಾಣೆ ಅವರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು 2 ವಾರದೊಳಗೆ ಮಹಾರಾಷ್ಟ್ರ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಸೂಚಿಸಿದೆ.
ಇದೇ ವೇಳೆ ರಾಣೆ ಪರ ವಕೀಲರು ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲಾವಕಾಶ ನೀಡಬೇಕು. ಈ ಅವಧಿಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಮನವಿ ಮಾಡಿದರು. ಆದರೆ ನ್ಯಾಯಾಲಯ ಈ ಮೇಲ್ಮನವಿಯನ್ನೂ ತಿರಸ್ಕರಿಸಿತು.
ಬೃಹತ್ ಮುಂಬೈ ಮಹಾನಗರ ಪಾಲಿಕೆ 2 ವಾರದೊಳಗೆ ಕಟ್ಟಡವನ್ನು ಧ್ವಂಸಗೊಳಿಸಬೇಕು. ಹಾಗೂ ಒಂದು ವಾರದೊಳಗೆ ಕೈಗೊಳ್ಳುವ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ಸೂಚಿಸಿದೆ.







