ಮದ್ಯ ನಿಷೇಧಿತ ಬಿಹಾರದಲ್ಲಿ ವಶಪಡಿಸಿಕೊಂಡಿರುವ ಮದ್ಯದ ಬಾಟಲಿಗಳಿಂದ ಬಳೆ ತಯಾರಿಸುವ ವಿಭಿನ್ನ ಯತ್ನಕ್ಕೆ ಬಿಹಾರ ಸರ್ಕಾರ ಕೈ ಹಾಕಿದೆ.
ಜಪ್ತಿ ಮಾಡಿರುವ ಮದ್ಯದ ಬಾಟಲಿಗಳಿಂದ ಬಳೆಗಳನ್ನು ತಯಾರಿಸುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಹೊಸ ಉದ್ಯೋಗ ಕಲ್ಪಿಸಿದಂತಾಗುತ್ತದೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡಿದಂತಾಗುತ್ತದೆ ಎಂದು ವಿನೂತನ ಪ್ರಯೋಗಕ್ಕೆ ಅಲ್ಲಿನ ಸರ್ಕಾರ ಕೈ ಹಾಕಿದೆ.
ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಲು ಬಿಹಾರ ಸರ್ಕಾರ ಜಾರಿಗೆ ತಂದಿರುವ ಜೀವಿಕಾ ಯೋಜನೆಯನ್ನು ಉತ್ತೇಜಿಸುವ ಸಲುವಾಗಿ ಈ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಲಾಗಿದೆ. ಬಳೆಗಳನ್ನು ತಯಾರಿಸುವ ಘಟಕಕ್ಕೆ ಬಿಹಾರ ಮದ್ಯಪಾನ ತಡೆ ಇಲಾಖೆಯು 1 ಕೋಟಿ ರೂಪಾಯಿ ಅನುದಾನವನ್ನ ನೀಡುತ್ತಿದೆ.

ಮದ್ಯವನ್ನ ನಿಷೇಧಿಸಿದ್ದರು ಸಹ ಪ್ರತಿ ವರ್ಷ ರಾಜ್ಯದಲ್ಲಿ ಅಪಾರ ಪ್ರಮಾಣದ ಮಧ್ಯವನ್ನ ವಶಪಡಿಸಿಕೊಳ್ಳಲಾಗುತ್ತಿದೆ. ವಶಪಡಿಸಿಕೊಂಡ ಮಧ್ಯದ ಬಾಟಲಿಗಳನ್ನು ನಾಶಪಡಿಸಲು ಅಧಿಕಾರಿಗಳು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಜೀವಿಕಾ ಯೋಜನೆಯಡಿ ಬಳೆಗಳನ್ನು ತಯಾರಿಸಲು ಕಚ್ಚಾ ವಸ್ತುವಾಗಿ ಜಪ್ತಿ ಮಾಡಿದ ಮದ್ಯದ ಬಾಟಲಿಗಳನ್ನು ಕೊಡಲಾಗುವುದು ಮತ್ತು ಅದರಿಂದ ಬಳೆಗಳನ್ನು ತಯಾರಿಸುವುದು ಹೇಗೆ ಎಂಬುದರ ಬಗ್ಗೆ ತರಭೇತಿ ನೀಡಲಾಗಿದೆ ಎಂದು ಸಚಿವ ಸುನೀಲ್ ಹೇಳಿದ್ದಾರೆ.