ನಾನು 60 ರನ್ ಹೊಡೆದರೂ ವಿಫಲನಾದೆ ಎಂದು ಜನರು ಹೇಳುವುದು ಕೇಳಿದಾಗ ನನಗೆ ಆಶ್ಚರ್ಯ ಆಗುತ್ತಿತ್ತು ಎಂದು ಸುಮಾರು ವರ್ಷಗಳ ನಂತರ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ಏಷ್ಯಾಕಪ್ ನಲ್ಲಿ ಆಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಸಿಡಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಶತಕವನ್ನು ಪತ್ನಿ ಅನುಷ್ಕಾ ಶರ್ಮ ಹಾಗೂ ಪುತ್ರಿ ವಿರುಷಾಗೆ ಅರ್ಪಿಸುವುದಾಗಿ ತಿಳಿಸಿದರು.
ನನಗೆ ಆಶ್ಚರ್ಯ ಆಗಿದ್ದು ಏನೆಂದರೆ ನಾನು 60 ರನ್ ಹೊಡೆದರೂ ವಿಫಲನಾದೆ ಎಂದು ಹೇಳುತ್ತಿದ್ದರು. ಇದು ನನಗೆ ನಿಜಕ್ಕೂ ಆಘಾತ ಅನಿಸಿತು. ನಾನು ಚೆನ್ನಾಗಿಯೇ ಬ್ಯಾಟ್ ಮಾಡುತ್ತಿದ್ದೆ ಮತ್ತು ತಂಡಕ್ಕೆ ಉತ್ತಮ ಕೊಡುಗೆಯನ್ನೇ ಕೊಡುತ್ತಿದ್ದೆ. ಆದರೆ ಇದು ಅವರಿಗೆ ಸಾಕಾಗುತ್ತಿರಲಿಲ್ಲ ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
![](https://pratidhvani.com/wp-content/uploads/2022/08/kohli-1.jpg)
ದೇವರು ನನಗೆ ಉತ್ತಮ ಅವಕಾಶ ನೀಡಿದ್ದಾನೆ. ಹಾಗಾಗಿ ನಾನು ಈ ಎಲ್ಲದಕ್ಕೂ ಉತ್ತರ ಹೇಳುವ ಜಾಗದಲ್ಲಿ ಇದ್ದೇನೆ. ಎಲ್ಲದಕ್ಕೂ ದೇವರ ಹೇಸರು ಹೇಳಲು ನನಗೆ ಮುಜುಗರವಿಲ್ಲ. ಯಾಕೆಂದರೆ ಎಲ್ಲರಿಗೂ ಗುರಿ ಇರುತ್ತದೆ. ಆದರೆ ಕಠಿಣ ಶ್ರಮ ಅಗತ್ಯ ಎಂದರು.
ಕಠಿಣ ಸಂದರ್ಭದಲ್ಲಿ ನನ್ನ ಜೊತೆ ತಂಡ ಹಾಗೂ ಆಡಳಿತ ಮಂಡಳಿ ಇತ್ತು. ನಾನು ರನ್ ಗಳಿಸದೇ ಇದ್ದರೂ ನಿನ್ನು ಬ್ಯಾಟ್ ಮಾಡುವುದನ್ನು ಎಂಜಾಯ್ ಮಾಡು ಎಂದು ಬೆಂಬಲಿಸಿದರು ಎಂದು ಕೊಹ್ಲಿ ಹೇಳಿದರು.
ನನಗೆ ಪ್ರತಿಯೊಬ್ಬರು ಸಲಹೆ ನೀಡುತ್ತಿದ್ದರು. ಇದನ್ನು ಮಾಡಬೇಡ. ಹಾಗೆ ಮಾಡು ಹೀಗೆ ಮಾಡು ಎಂದು. ನಾನು ನನ್ನ ಅತ್ಯುತ್ತಮ ಪ್ರದರ್ಶನದ ವೀಡಿಯೊಗಳನ್ನು ಕೂಡ ಪದೇಪದೆ ನೋಡಿದೆ. ನಾನು ಆಗ ಹೇಗೆ ಆಡುತ್ತಿದ್ದೆನೋ ಈಗಲೂ ಅದೇ ರೀತಿ ಆಡುತ್ತಿದ್ದಾರೆ. ಆದರೆ ನನ್ನ ಮನಸ್ಸಿನಲ್ಲಿ ಏನು ಆಗುತ್ತಿತ್ತು ಎಂದು ಮಾತ್ರ ಗೊತ್ತಾಗುತ್ತಿರಲಿಲ್ಲ ಎಂದು ಕೊಹ್ಲಿ ವಿವರಿಸಿದರು.
ವಿಶ್ವಕಪ್ ಸಿದ್ಧತೆ ದೃಷ್ಟಿಯಿಂದ ನಾನು ಹೀಗೆ ಆಡಬೇಕು ಎಂದು ಬಯಸಿದ್ದೆ. ಅದೇ ರೀತಿ ಆಡುತ್ತಿದ್ದೇನೆ ಎಂದು ಕೊಹ್ಲಿ ಹೇಳಿದರು.