ಭೂಗಳ್ಳರಿಗೆ ನನ್ನಿಂದ ಸಹಾಯವಾಗಿದೆ ಎಂದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಯಾರು ಯಾರು ಕೆರೆ, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಬಗ್ಗೆ ಸಿಎಂ ಏನು ಬೇಕಾದರೂ ಮಾತನಾಡಲಿ, ನನ್ನ ಬಗ್ಗೆ ಮಾತನಾಡುವಾಗ ನೋಡಿಕೊಂಡು ಮಾತನಾಡಲಿ. ಎಚ್ಚರಿಕೆಯಿಂದ ಮಾತನಾಡಿದರೆ ಉತ್ತಮ ಎಂದು ಎಚ್ಚರಿಸಿದ್ದಾರೆ.

ಫೆರಿಫೆರಲ್ ರಿಂಗ್ ರೋಡ್ ಗೆ 6 ಸಾವಿರ ಕೋಟಿ ರೂ. ಯೋಜನೆ ರೂಪಿಸಿದ್ದೆ. ಇಂದು 22 ಸಾವಿರ ಕೋಟಿ ರೂ. ಆಗಿದೆ. ಇದು ಕಾಂಗ್ರೆಸ್, ಬಿಜೆಪಿಯ ಸಾಧನೆ. ಅಂದಾಜು ವೆಚ್ಚ ಹೆಚ್ಚಿಸುತ್ತಾ ಹೋಗುವುದೇ ಇವರ ಸಾಧನೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದ್ದೇನೆಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಹಾಗಾದರೆ ಅ ಹಣ ಯಾರ ಮನೆಗೆ ಹೋಯಿತು? ಧೈರ್ಯ ಇದ್ದರೆ ಒತ್ತುವರಿ ಮಾಡಿಕೊಂಡವರ ಹೆಸರುಗಳನ್ನು ಬಹಿರಂಗ ಮಾಡಲಿ. ಬೆಂಗಳೂರಿನಲ್ಲಿ ಕೆರೆ, ರಾಜಕಾಲುವೆ ಒತ್ತುವರಿದಾರರು ಯಾರು ಎನ್ನುವುದು ಜನರಿಗೂ ಗೊತ್ತಾಗಲಿ ಎಂದು ಪ್ರಶ್ನಿಸಿದ್ದಾರೆ.
ಬಿಬಿಎಂಪಿ ಬಿಜೆಪಿ ಕೈಯಲ್ಲೇ ಇತ್ತು. ಅವರು ಏನೆಲ್ಲ ಮಾಡಿದ್ದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ದಾಖಲೆಗಳಿದ್ದ ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿದ್ದು ಇವರ ಸಾಧನೆ ಅಷ್ಟೇ. ನನ್ನ ಎರಡು ಅವಧಿಯಲ್ಲಿ ಅಕ್ರಮಕ್ಕೆ ಪೋಷಣೆ ಮಾಡಿರುವ ದಾಖಲಾತಿ ಬಿಡುಗಡೆ ಮಾಡಲಿ ಎಂದು ಸವಾಲೆಸೆದಿದ್ದಾರೆ.
ಸರ್ಕಾರಿ ಜಮೀನು ಲೂಟಿ ಹೊಡೆಯುವ ಬಗ್ಗೆ ಸದನ ಸಮಿತಿ ಮಾಡಿದ್ದೆ. ಯಾರ ಕಾಲದಲ್ಲಿ ಏನಾಗಿದೆಯೆಂದು ಮುಖ್ಯಮಂತ್ರಿಗಳು ಶ್ವೇತ ಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ್ದಾರೆ.

ಕೆಂಪೇಗೌಡರ ಹೆಸರಿನಲ್ಲಿ ಬಿಜೆಪಿ ಪ್ರಚಾರ ಪಡೆಯುತ್ತಿದೆ
ಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡುತ್ತೇನೆ ಅಂತಿದ್ದಾರೆ. ಸೀಮಾಂಧ್ರದ ರಾಜಧಾನಿ ಅಮರಾವತಿ ಕಟ್ಟಲು ಮಣ್ಣು ತಂದಿದ್ದರು ಮೋದಿ. ಏನು ಆಯ್ತು ಆ ಮಣ್ಣು? ಎಂದು ಪ್ರಶ್ನಿಸಿದ್ದಾರೆ.
ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಮಾಡುತ್ತಾರಂತೆ. ಮೊದಲು ಮಳೆಯಿಂದ ಆಗಿರುವ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡ್ರಪ್ಪ ಇವರದ್ದೆಲ್ಲ ಕೇವಲ ಪ್ರಚಾರ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.
ಮುರುಘಾ ಶ್ರೀಗಳ ಬಂಧನ ವಿಚಾರ ಚರ್ಚೆ ಮಾಡದಿರುವುದೇ ಸೂಕ್ತ
ಮುರುಘಾಮಠದ ಶ್ರೀಗಳ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಗ್ಗೆ ಚರ್ಚೆ ಮಾಡದಿರುವುದೇ ಸೂಕ್ತ. ಆದರೆ, ರಾಜ್ಯ ಸರಕಾರ ಜವಾಬ್ದಾರಿಯುತವಾಗಿ ಪ್ರಕರಣವನ್ನ ನಿರ್ವಹಿಸಬೇಕು. ಏನೇನು ತೀರ್ಮಾನ ಮಾಡಬೇಕೋ ಮಾಡಲಿ ಎಂದು ಹೇಳಿದ್ದಾರೆ.
ಈ ರೀತಿಯ ಘಟನೆ ನಡೆಯಬಾರದಿತ್ತು ಎನ್ನುವುದು ನನ್ನ ಅಭಿಪ್ರಾಯ. ಇದು ತುಂಬಾ ಸೂಕ್ಷ್ಮ ವಿಚಾರ. ಮೊದಲೇ ನಮ್ಮ ರಾಜ್ಯ ಭಾವನಾತ್ಮಕ, ಆಚಾರ ವಿಚಾರಗಳಲ್ಲಿ ಬೆಯುತ್ತಿದೆ. ಇಂತಹ ವಿಚಾರಗಳಲ್ಲಿ ನಾವು ಚರ್ಚೆ ಮಾಡದೆ ಇರುವುದೇ ಸೂಕ್ತ. ಸರ್ಕಾರದ ಮಟ್ಟದಲ್ಲಿ ಏನು ತನಿಖೆ ಮಾಡಬೇಕೋ ಮಾಡಲಿ. ತನಿಖೆ ವಿಳಂಬದ ವಿಚಾರ ಸರ್ಕಾರಕ್ಕೆ ಸಂಬಂಧಿಸಿದ್ದು, ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದಿದ್ದಾರೆ.