ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲು ಕ್ರಮ ವಹಿಸುವುದಾಗಿ ರಕ್ತದಲ್ಲಿ ಬರೆದು ಕೊಡುತ್ತೇನೆಂದು ಹೇಳಿದ್ದ ಶ್ರೀರಾಮುಲು ಮಾತಿಗೆ ತಪ್ಪಿದ್ದಾರೆ ಎಂಬುದಾಗಿ ಸಿದ್ದರಾಮಯ್ಯ ಆರೋಪಕ್ಕೆ ಶ್ರೀರಾಮುಲು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಹೌದು, ‘ಸುಳ್ಳೇ ನಮ್ಮ ಮನೆ ದೇವರು ಎಂಬುದನ್ನು ಸಿದ್ದರಾಮಯ್ಯನವರನ್ನು ನೋಡಿ ಕಲಿಯಬೇಕು. ಏಕೆಂದರೆ ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು. ಮಾತೆತ್ತಿದರೆ ಅಹಿಂದ ಬಗ್ಗೆ ಮೊಸಳೆ ಕಣ್ಣೀರಿಡುವ ನೀವು 2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಅವರಿಗೆ ಕೊರಟಗೆರೆಯಲ್ಲಿ ಬೆನ್ನಿಗೆ ಚೂರಿ ಹಾಕಿದ್ದು ಯಾರು? ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಎಂಬುದನ್ನು ಬಹಿರಂಗ ಪಡಿಸಲೇ?’ ಎಂದು ಎಚ್ಚರಿಸಿದ್ದಾರೆ.
‘ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡ ನೀವು ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ. ಎಚ್. ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದ ಸಿ. ಕೆ. ಜಾಫರ್ ಷರೀಫ್ ಸೇರಿದಂತೆ ಹಲವರನ್ನು ಮುಗಿಸಿಯೇ ಮೇಲಕ್ಕೆ ಬಂದ ನಿಮ್ಮದು ಯಾವ ಸೀಮೆಯ ಅಹಿಂದ? ಅಹಿಂದ ನಾಯಕರನ್ನು ಮುಗಿಸಿರುವ ನಿಮ್ಮ ಮುಂದಿನ ಗುರಿ ಒಕ್ಕಲಿಗರೇ? ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಇರಬಹುದೇ? ನಿಮಗೆ ಸ್ಪರ್ಧೆಯೊಡ್ಡಬಹುದೆಂಬ ಆತಂಕದಿಂದ ಅವರನ್ನೂ ಮೂಲೆ ಗುಂಪು ಮಾಡುವ ನಿಮ್ಮ ಪ್ರಯತ್ನ ಮುಗಿದಿದೆಯೋ, ಮುಂದುವರೆಯುವುದೋ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ನಮ್ಮ ಸರಕಾರ ಶೀಘ್ರವೇ ಸಿಹಿ ಸುದ್ದಿ ನೀಡಲಿದ್ದು, ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.






