ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜಿಛ್ಕರ್ ಅವರು ನನಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಸಲಹೆ ನೀಡಿದರು. ಆಗ ಶ್ರೀಕಾಂತ್ ಜಿಛ್ಕರ್ ಅವರ ಮಾತಿಗೆ ಉತ್ತರ ನೀಡುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಸೇರೋದಕ್ಕಿಂತಾ ಬಾವಿಗೆ ಬೀಳೋದು ಉತ್ತಮ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕಾಂಗ್ರೆಸ್ ನಾಯಕ ಶ್ರೀಕಾಂತ್ ಜಿಛ್ಕರ್ ಅವರು ನನಗೆ, ಕಾಂಗ್ರೆಸ್ ಪಕ್ಷದಲ್ಲಿ ನಿನಗೆ ಉತ್ತಮ ಭವಿಷ್ಯ ಇದೆ. ನೀವು ಒಳ್ಳೆಯ ವ್ಯಕ್ತಿ ಕೆಟ್ಟ ಪಕ್ಷದಲ್ಲಿ ಇರೋದು ಬೇಡ ನಿನ್ನ ಭವಿಷ್ಯದ ದೃಷ್ಟಿಯಿಂದ ಹೇಳುತ್ತಿದ್ದೇನೆ, ಕಾಂಗ್ರೆಸ್ ಸೇರು ಎಂದು ಅವರು ಸಲಹೆ ನೀಡಿದ್ದರು ಎಂದು ಗಡ್ಕರಿ ನೆನಪಿಸಿಕೊಂಡರು.
ಆಗ ಶ್ರೀಕಾಂತ್ ಜಿಛ್ಕರ್ ಅವರ ಮಾತಿಗೆ ಉತ್ತರ ನೀಡುತ್ತಾ, ನಾನು ಬೇಕಿದ್ದರೆ ಬಾವಿಗೆ ಬೀಳುತ್ತೇನೆ, ಆದರೆ ಕಾಂಗ್ರೆಸ ಪಕ್ಷ ಮಾತ್ರ ಸೇರೋದಿಲ್ಲ ಎಂದಿದ್ದೆ. ಏಕೆಂದರೆ, ಆ ಪಕ್ಷದ ಸಿದ್ಧಾಂತವನ್ನು ನಾನು ಇಷ್ಟ ಪಡೋದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದರು.
ನನ್ನ ಪಕ್ಷವು ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದ ಸಮಯದಲ್ಲೂ ನನ್ನ ನಿರ್ಧಾರ ಇದಾಗಿತ್ತು ಎಂದು ಗಡ್ಕರಿ ಹೇಳಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಹಿಂದಿನ ಅಮೇರಿಕನ್ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಜೀವನಚರಿತ್ರೆಯನ್ನು ಉಲ್ಲೇಖಿಸಿ, ಯಾರಾದರೂ ಸೋಲು ಕಂಡಾಗ ಅವರ ಸಾಂಗತ್ಯವನ್ನು ಯಾರೂ ಕೂಡ ತೊರೆಯಬಾರದು ಎಂದು ಹೇಳಿದರು.
ಸೋಲು ಕಂಡಾಗ ಯಾವುದೇ ವ್ಯಕ್ತಿ ಕೂಡ ಸೋತಂತಲ್ಲ. ರಣರಂಗವನ್ನು ತೊರೆದಾಗ ಅಥವಾ ಯುದ್ಧವನ್ನೇ ಮಾಡದೇ ಇದ್ದಾಗ ಆತ ಸೋತಂತೆ. ನಿಮ್ಮಲ್ಲಿ ಧನಾತ್ಮಕ ವರ್ತನೆಗಳಿರಬೇಕು, ಆತ್ಮನಂಬಿಕೆ ಇರಬೇಕು. ಆದರೆ, ಅಹಂಕಾರವಿರಬಾರದು ಎಂದು ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.