ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟಕ್ಕೆ ಶೀಘ್ರವೇ ಸರ್ಜರಿ ನಡೆಯಲಿದ್ದು ಚುನಾವಣೆ ದೃಷ್ಟಿಯಲ್ಲಿ ನೂತನ ಸಚಿವ ಸಂಪುಟ ರಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಈ ಹಿಂದೆ ಬಿ.ಎಸ್.ವೈ ಸಿಎಂ ಆಗಿದ್ದ ಸಮಯದಲ್ಲಿ ಇದ್ದ ಡಿಸಿಎಂ ಹುದ್ದೆಗಳನ್ನು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಡಿಸಿಎಂ ಹೆದ್ದೆ ಸೃಷ್ಟಿ ಬಗ್ಗೆ ಚರ್ಚೆಗಳು ಗರಿಗೆದರಿವೆ.
ಸದ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕ್ಯಾಬಿನಟ್ನಲ್ಲಿ 5 ಸ್ಥಾನಗಳು ಖಾಲಿಯಿದ್ದು ಇನ್ನು 8-9 ತಿಂಗಳಲ್ಲಿ ಚುನಾವಣೆ ಇರುವ ಕಾರಣ ಖಾಲಿಯಿರು ಸ್ಥಾನಗಳನ್ನು ತುಂಬಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ಸಹಕಾರಿಯಾಗುವಂತಹ ಮಂತ್ರಿಮಂಡಲ ರಚಿಸಲು ರಾಜ್ಯ ಬಿಜೆಪಿ ನಾಯಕರು ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ರಾಜ್ಯ ಪ್ರವಾಸದಲ್ಲಿದ್ದ ಉಸ್ತುವಾರಿ ಅರುಣ್ ಕುಮಾರ್ ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ, ಬಿ.ಎಸ್.ವೈ ಜೊತೆಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯದ ಮಟ್ಟಿಗೆ ವೋಟ್ ಬ್ಯಾಂಕ್ ಆಧಾರದ ಮೇಲೆ ಡಿಸಿಎಂ ಹುದ್ದೆ ಸೃಷ್ಟಿಸಲು ಕಮಲ ಪಡೆ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕಾರ್ಯಸೂಚಿಯನ್ನು ಸಹ ಸಿದ್ದಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಇನ್ನು ಸಂಪುಟ ಸರ್ಜರಿ ವಿಚಾರಕ್ಕೆ ಬರುವುದಾದರೆ ಕೆಲವು ನಿಷ್ಕ್ರಿಯ ಸಚಿವರ ಜೊತೆಜೊತೆಗೆ ಅನೇಕರಿಗೆ ಸಂಪುಟದದಿಂದ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ. ಹಳಬರಿಗೆ ಕೊಕ್ ನೀಡಿ ಹೊಸಬರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಹಾಲಿ ಸಚಿವರ ಪೈಕಿ ಕೆಲವರ ಖಾತೆ ಬದಲಾಯಿಸುವುದು ಸಹ ಖಚಿತವಾಗಿದೆ.

ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಬೇರೆ ಖಾತೆ ನೀಡಿ ಹಿರಿಯ ಅನುಭವಿ ಸಚಿವರಿಗೆ ಗೃಹ ಖಾತೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಗೃಹ ಖಾತೆ ಕಂದಾಯ ಸಚಿವ ಆರ್.ಅಶೋಕ್ ಪಾಲಾಗುವ ಸಾಧ್ಯತೆಯಿದೆ.
ಆದರೆ, ಸಂಪುಟ ಪುನಾರಚನೆ ಕುರಿತು ಬಿಜೆಪಿ ಹೈಕಮಾಂಡ್ ಯಾವುದೇ ಗುಟ್ಟನ್ನು ಬಿಟ್ಟುಕೊಡದೆ ತನ್ನ ತಂತ್ರವನ್ನ ಹೆಣೆಯುತ್ತಿದೆ. ತಿಂಗಳಾಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಂಪುಟ ಸರ್ಜರಿಗೆ ಮುಹೂರ್ತ ನಿಗದಿಯಾಗಬಹುದು ಎಂದು ಹೇಳಲಾಗುತ್ತಿದೆ.
ಯಾವ ಕ್ಷಣದಲ್ಲಾದರೂ ಸಿಎಂ ಬೊಮ್ಮಾಯಿಗೆ ದೆಹಲಿಗೆ ಬರುವಂತೆ ಬುಲಾವ್ ಬರುತ್ತದೋ ಕಾದು ನೋಡಬೇಕಿದೆ. ಈಗಾಗಲೇ ರಾಜ್ಯ ಬಿಜೆಪಿ ನಾಯಕರು ಸಚಿವ ಆಕಾಂಕ್ಷಿಗಳ ಪಟ್ಟಿಯನ್ನು ಹೈ ಕಮಾಂಡ್‌ಗೆ ಕಳುಹಿಸಲಾಗಿದ್ದು ಅಂತಿಮ ಮುದ್ರೆಗೆ ರಾಜ್ಯ ನಾಯಕರು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.