UPI ಭಾರತದ ಪಾವತಿ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿದೆ. ನಗದು ರಹಿತವಾಗಿ ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಮೂಲಕ ಪಾವತಿ ಮಾಡುತ್ತಿರುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲು ಪ್ರಸ್ತಾಪ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇದೀಗಿ ಈ ಕುರಿತು ಕೇಂದ್ರ ಸ್ಪಷ್ಟನೆ ನೀಡಿದೆ.
ಹೌದು, ಈ ಕುರಿತು ಕೇಂದ್ರ ವಿತ್ತ ಸಚಿವಾಲಯ ಭಾನುವಾರ ಟ್ವೀಟ್ ಮಾಡಿದ್ದು, ಯುಪಿಐ ವ್ಯವಸ್ಥೆಯಿಂದ ಜನರಿಗೆ ಅನುಕೂಲವಾಗಿದೆ. ಹೀಗಾಗಿ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲ್ಲ. ಜತೆಗೆ ಡಿಜಿಟಲ್ ಪಾವತಿಯಿಂದ ವಿತ್ತೀಯ ವ್ಯವಸ್ಥೆಯಲ್ಲಿ ಜನರಿಗೆ ಅನುಕೂಲವಾಗಿದೆ ಮುಂದೆಯೂ ಜನಸ್ನೇಹಿ ಡಿಜಿಟಲ್ ಪಾವತಿ ಉತ್ತೇಜಿಸುತ್ತೇವೆ ಎಂದು ಹೇಳಿದೆ.
ಕೆಲ ದಿನಗಳ ಹಿಂದೆ ಆರ್‌ಬಿಐ ಬಿಡುಗಡೆ ಮಾಡಿದ್ದ ಸಲಹಾ ಪತ್ರದಲ್ಲಿ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಹಲವು ಆನ್‌ಲೈನ್ ವ್ಯವಸ್ಥೆಗಳ ಮೂಲಕ ನಡೆಸುವ ವಹಿವಾಟಿಗೆ ಶುಲ್ಕ ವಿಧಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೋರಿತ್ತು.

ಯುಪಿಐ ಎಂದರೇನು?
ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ ಅಥವಾ ಏಕೀಕೃತ ಪಾವತಿ ವ್ಯವಸ್ಥೆಯ ಸಂಕ್ಷಿಪ್ತ ರೂಪವೇ ಯುಪಿಐ. ಯಾವುದೇ ಬ್ಯಾಂಕ್ ಖಾತೆ ಹೊಂದಿದವರಿಗೆ ಅವರವರ ಬ್ಯಾಂಕುಗಳ ಹೆಸರಿನಲ್ಲಿ ಮೊಬೈಲ್ ಫೋನ್ ಆಯಪ್ ಆಧಾರಿತ ವಹಿವಾಟು ನಡೆಸುವುದಕ್ಕಾಗಿ ವ್ಯಕ್ತಿಗತ ಯುಪಿಐ ವಿಳಾಸ (ಐಡಿ) ಇರುತ್ತದೆ. ಸರಳವಾಗಿ ಹೇಳಬೇಕಿದ್ದರೆ, ಇದು ವೈಯಕ್ತಿಕ ಇಮೇಲ್ ವಿಳಾಸದಂತೆ. ಮತ್ತೊಬ್ಬರ ಇಮೇಲ್ ವಿಳಾಸ ಗೊತ್ತಿದ್ದರೆ ಹೇಗೆ ಸುಲಭವಾಗಿ ಅವರಿಗೆ ತಕ್ಷಣವೇ ಸಂದೇಶ ಕಳುಹಿಸಬಹುದೋ, ವೈಯಕ್ತಿಕ ಯುಪಿಐ ವಿಳಾಸ ಗೊತ್ತಿದ್ದರೆ ತಕ್ಷಣ ಹಣವನ್ನು ಮೊಬೈಲ್ ಫೋನ್ ಆಯಪ್ ಮೂಲಕ ವರ್ಗಾಯಿಸಬಹುದು. ಇದು ಬ್ಯಾಂಕ್ ಖಾತೆಯಿಂದ ಮತ್ತೊಂದು ಖಾತೆಗೆ ನೇರವಾಗಿ ಮತ್ತು ತತ್‌ಕ್ಷಣ ಹಣ ವರ್ಗಾವಣೆಯಾಗುವ ವ್ಯವಸ್ಥೆ.