ಬಿಹಾರದಲ್ಲಿ ಆಡಳಿತರೂಢ ಜೆಡಿಯು-ಬಿಜೆಪಿ ನಡುವಿನ ಸಂಬಂಧ ಕದಡಿದ್ದು ಯಾವ ಕ್ಷಣದಲ್ಲಾದರು ಮೈತ್ರಿ ಕಡಿದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಜೆಡಿಯು ಮುಖ್ಯಸ್ಥ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ತಡರಾತ್ರಿ ಸೋನಿಯಾ ಗಾಂಧಿ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ಊಹಾಪೋಹಗಳಿಗೆ ಪುಷ್ಠಿ ನೀಡಿದಂತಿದೆ.
ಉಭಯ ನಾಯಕರು ಬಿಹಾರದಲ್ಲಿ ನೂತನ ಮೈತ್ರಿ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಯಾವುದು ಕೂಡ ಇನ್ನು ಅಧಿಕೃತವಾಗಿಲ್ಲ.

ಇನ್ನು ನಿತೀಶ್-ಸೋನಿಯಾ ಮಾತುಕತೆ ಬೆನ್ನಲ್ಲೇ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಜೆಡಿಯು ಹಾಗೂ ಕಾಂಗ್ರೆಸ್ ತನ್ನ ಶಾಸಕರಿಗೆ ಪಾಟ್ನಾ ತೊರೆಯದಂತೆ ಸೂಚಿಸಿದೆ.
ಇತ್ತ ಮಹತ್ವದ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಜನತಾ ದಳ ನಿತೀಶ್ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡರೆ ನಾವು ಅವರ ಜೊತೆ ಹೋಗಲು ಸಿದ್ದರಿದ್ದೇವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ನಿತೀಶ್ ಎನ್ಡಿಎ ಮೈತ್ರಿಕೂಟ ತೊರೆದು ಮಹಾಘಟಬಂಧನ್ 2.0 ನೇತೃತ್ವ ವಹಿಸಲಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.
ರಾಷ್ಟ್ರಪತಿ ಚುನಾವಣೆ, ಕೇಂದ್ರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದಿರುವುದು ನಿತೀಶ್ ಬಿಜೆಪಿ ನೇತೃತ್ವದ ಮೈತ್ರಿ ಕೂಟವನ್ನು ತೊರೆಯಲು ಮುಖ್ಯ ಕಾರಣ ಎಂದು ತಿಳಿದು ಬಂದಿದೆ.







