ಇಷ್ಟು ದಿನ ಬಿಬಿಎಂಪಿ ಚುನಾವಣಾಗೆ ಹಿಡಿದಿದ್ದ ಗ್ರಹಣ ಕೊನೆಗೂ ಇಂದು ಬಿಟ್ಟಂತಾಗಿದೆ. ಏನಾದರು ಮಾಡಿ ಚುನಾವಣಾ ಮುಂದೂಡಬೇಕು ಅಂತ ತಂತ್ರಗಾರಿಕೆ ನಡೆಸಿದ್ದ ಬೆಂಗಳೂರಿನ ಶಾಸಕರು ಹಾಗೂ ರಾಜ್ಯ ಸರ್ಕಾರಕ್ಕೆ ಇದು ಮುಖ ಭಂಗವಾಗಿದೆ. ಕೊನೆಗೂ ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಒಂದು ವಾರದಲ್ಲಿ ಮೀಸಲಾತಿ ಪ್ರಕಟಿಸುವಂತೆ ಸುಪ್ರೀಂ ಸೂಚನೆ
ಬಿಬಿಎಂಪಿಯ ಪುರಪಿತ್ರುಗಳ ಅಧಿಕಾರ ಅವಧಿ 2020 ಸೆಪ್ಟೆಂಬರ್ 20 ಕ್ಕೆ ಮುಗಿದಿತ್ತು. ಅದಾದ ಬಳಿಕ ನಿಗದಿತ ಸಮಯಕ್ಕೆ ಚುನಾವಣೆ ನಡೆಸಿ ಅಂತ ಹೈ ಕೋರ್ಟ್ ಆದೇಶ ನೀಡಿದ್ದರೂ ಕೂಡಾ ಚುನಾವಣೆ ನಡೆಸದೆ, ಡಿ ಲಿಮಿಟೇಷನ್ ಹಾಗೂ ಬಿಬಿಎಂಪಿ ಆಕ್ಟ್ ನೆಪ ನೀಡಿ ರಾಜ್ಯ ಸರ್ಕಾರವೇ ಸುಪ್ರೀಂ ಮೊರೆ ಹೋಗಿತ್ತು. ಕಳೆದ ಎರಡು ವರ್ಷಗಳಿಂದ ಸುಧೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಒಂದು ವಾರದಲ್ಲಿ ಮೀಸಲಾತಿ ಪ್ರಕಟಿಸಿ ಚುನಾವಣಾ ಆಯೋಗಕ್ಕೆ ನೀಡಬೇಕು. ಅಷ್ಟೇ ಅಲ್ಲದೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸಬೇಕು ಅಂತ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಸದ್ಯ ಬಿಬಿಎಂಪಿ ಕೂಡಾ ಡಿ ಲಿಮಿಟೇಷನ್ ಕಾರ್ಯ ಪೂರ್ಣಗೊಳಿಸಿದೆ. ಇನ್ನು ಬಾಕಿ ಇದ್ದ ಒಬಿಸಿ ಮೀಸಲಾತಿ ಗೆ ಸಂಬಂಧಿಸಿದಂತೆ ನ್ಯಾ. ಮೂರ್ತಿ ಭಕ್ತವತ್ಸಲ ವರದಿಕೂಡ ಸಲ್ಲಿಕೆಯಾಗಿದೆ. ಇದರಿಂದ ಸುಪ್ರೀಂ ಕೂಡಾ ಅವಶ್ಯಕತೆ ಇದ್ದರೆ ಡಿ ಲಿಮಿಟೇಷನ್ ಗೊಂದಲ ಬಗೆ ಹರಿಸಿ, ಇಲ್ಲವಾದರೆ ಒಂದು ವಾರದಲ್ಲಿ ಮೀಸಲಾತಿ ಪ್ರಕಟಿಸಿ ಅಂತ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಇದರಿಂದ ಮೀಸಲಾತಿ ಪ್ರಕಟಣೆ ಸಲ್ಲಿಸಿದ ಬಳಿಕ ಆಕ್ಷೇಪಣೆ ಸಲ್ಲಿಸಲು ಕನಿಷ್ಟ ಒಂದು ವಾರ ಸಮಯ ನೀಡಬೇಕಿದೆ. ಇದರಿಂದ ಇಷ್ಟು ದಿನ ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ನಡೆಸಿದ ಬಿಬಿಎಂಪಿ ಮಾಜಿ ವಿಪಕ್ಷ ನಾಯಕ ಅಬ್ದುಲ್ ವಾಜೀದ್ ಹಾಗೂ ಎಂ. ಶಿವರಾಜುಗೆ ಗೆಲವು ಸಿಕ್ಕಂತಾಗಿದ್ದು. ಸುಪ್ರೀಂ ಆದೇಶವನ್ನ ಸ್ವಾಗತಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಗೆ ಆಗಸ್ಟ್ 5ಕ್ಕೆ ಡೆಡ್ ಲೈನ್ ನೀಡಿದ ಸುಪ್ರೀಂ ಕೋರ್ಟ್
ಸದ್ಯ ರಾಜ್ಯ ಚುನಾವಣಾ ಆಯೋಗ ಕೂಡಾ ಈಗಾಗಲೇ ಚುನಾವಣಾ ಅಧಿಕಾರಿಗಳನ್ನ ನೇಮಿಸಿದ್ದು. ತಲಾ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಒಬ್ಬ ನೋಡಲ್ ಅಧಿಕಾರಿಗಳನ್ನ ನೇಮಿಸಿದೆ. ಈಗ ಆಗಸ್ಟ್ 5ಕ್ಕೆ ಏನೆಲ್ಲಾ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ ಎಂಬುದರ ಬಗ್ಗೆ ಸುಪ್ರೀಂ ಮತ್ತೊಮ್ಮೆ ವಿಚಾರಣೆ ನಡೆಸಲಿದ್ದು. ಅಂದು ಕೊಂಡಂತೆ ಎಲ್ಲವೂ ಆದರೆ ಅಕ್ಟೋಬರ್ ಅಂತ್ಯಕ್ಕೆ ಚುನಾವಣೆ ನಡೆಯುವ ಸಾದ್ಯತೆ ಇದೆ. ಅಷ್ಟರಲ್ಲಿ ಬೆಂಗಳೂರಿನ ಶಾಸಕರು ಹಾಗೂ ರಾಜ್ಯ ಸರ್ಕಾರ ಮತ್ಯಾವ ಕುಂಟು ನೆಪ ನೀಡದೆ ಇದ್ದರೆ ಪಾಲಿಕೆ ಚುನಾವಣೆ ನಡೆದು ಅಧಿಕಾರ ಯಾರ ಕೈಗೆ ಎಂದು ತಿಳಿಯಲಿದೆ.