ಭಾರತೀಯ ನಾಗರಿಕರು ಮತ್ತು ಕಂಪನಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಎಷ್ಟು ಠೇವಣಿ ಇಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಭಾರತೀಯರು ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವ ಹಣದ ಕುರಿತು ಪ್ರಶ್ನೆಗಳಿಗೆ ಉತ್ತರಿಸಿರುವ ಸೀತಾರಾಮನ್, “ಭಾರತೀಯ ನಾಗರಿಕರು ಮತ್ತು ಕಂಪನಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಎಷ್ಟು ಠೇವಣಿ ಇಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ” ಎಂದು ಹೇಳಿದ್ದಾರೆ.
ಆದಾಗ್ಯೂ, ಕೆಲವು ಇತ್ತೀಚಿನ ಮಾಧ್ಯಮಗಳು, 2020 ಕ್ಕೆ ಹೋಲಿಸಿದರೆ 2021 ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಹೆಚ್ಚಾಗಿದೆ ಎಂದು ವರದಿ ಮಾಡಿವೆ. ಆದರೆ, ಈ ಠೇವಣಿಗಳು ಭಾರತೀಯರು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಕಪ್ಪು ಹಣದ ಮೊತ್ತವನ್ನು ಸೂಚಿಸೋದಿಲ್ಲ ಎಂದು ಕೂಡ ಈ ಮಾಧ್ಯಮ ವರದಿಗಳು ತಿಳಿಸಿವೆ.

ಸ್ವಿಸ್ ರಾಷ್ಟ್ರೀಯ ಬ್ಯಾಂಕಿನ (SNB) ವಾರ್ಷಿಕ ಬ್ಯಾಂಕಿಂಗ್ ಅಂಕಿಅಂಶಗಳನ್ನು ಭಾರತೀಯ ನಿವಾಸಿಗಳು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಠೇವಣಿಗಳ ವಿಶ್ಲೇಷಣೆಗೆ ಬಳಸಬಾರದು ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಸಚಿವೆ ಮಾಹಿತಿ ನೀಡಿದ್ದಾರೆ.