ಒಂದು ವರ್ಷ ನನ್ನ ಬಿಟ್ಟುಬಿಡಿ ಎಂದು ಕೇಂದ್ರ ತನಿಖಾ ಸಂಸ್ಥೆಗಳಿಗೆ ಮನವಿ ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಡಿಯಿಂದ ಸೋನಿಯಾ ಗಾಂಧಿ ಅವರ ವಿಚಾರಣೆ ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನನ್ನ ಜೊತೆ ವ್ಯಾಪಾರ ಮಾಡುತ್ತಿರುವ ಎಲ್ಲರಿಗೂ ನೋಟಿಸ್ ಕೊಡಲಾಗುತ್ತಿದೆ ಎಂದರು.
ಕೇಂದ್ರ ತನಿಖಾ ಸಂಸ್ಥೆಗಳು 5 ವರ್ಷದಿಂದ ನನ್ನ ಬೆನ್ನು ಬಿದ್ದಿದೆ. ನಾನು ಜೈಲಿಗೆ ಹೋಗಿ ಬಂದು 3 ವರ್ಷ ಆಯಿತು. ಈಗ ಮತ್ತೆ ಅವರಿಂದ ಲವ್ ಲೆಟರ್ ಗಳು ಬರುತ್ತಿವೆ. ನನಗೆ ಕಿರುಕುಳ ಕೊಟ್ಟಿದ್ದೂ ಸಾಲದು ಅಂತ ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೂ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.
ನನಗೂ ಇತ್ತೀಚೆಗೆ ಲವ್ ಲೆಟರ್ ಗಳು ಬರುತ್ತಿವೆ. ಚುನಾವಣೆ ಇರುವುದರಿಂದ ನನ್ನನ್ನು ಒಂದು ವರ್ಷ ಬಿಟ್ಟುಬಿಡಿ. ಆಮೇಲೆ ನಾನೇ ನಿಮ್ಮಲ್ಲಿಗೆ ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಅವರು ಹೇಳಿದರು.