ಚಿತ್ರರಂಗದಲ್ಲಿ ಪ್ರತಿನಿತ್ಯ ಹೊಸ ಹೊಸ ತರಹದ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಕೆಲವೊಮ್ಮೆ ಚಿತ್ರಗಳು ಹಿಟ್ ಆದರೆ, ಆ ಚಿತ್ರಗಳನ್ನ ಬೇರೆ ಭಾಷೆಗಳಿಗೆ ತರ್ಜುಮೆ ಮಾಡುತ್ತಾರೆ ಇದೀಗ ಕನ್ನಡ ಸಿನಿಮಾವೊಂದು ಬಿಡುಗಡೆಯಾದ 7 ವರ್ಷಗಳ ನಂತರ ಹಿಂದಿ ಭಾಷೆಗೆ ರಿಮೇಕ್ ಆಗುತ್ತಿದೆ.
ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ ರಂಗಿತರಂಗ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿದ್ದ ಈ ಚಿತ್ರ ಗೆದ್ದ ಪರಿ ಕಂಡು ಇಡೀ ಇಂಡಸ್ಟ್ರೀ ಒಮ್ಮೆ ದಂಗ್ ಆಗಿತ್ತು. ನಿರ್ದೇಶಕ ಅನೂಪ್ ಭಂಡಾರಿ ಅವರ ಚೊಚ್ಚಲ ಪ್ರಯತ್ನ ಅದಾಗಿತ್ತು. ಅವರ ಸಹೋದರ ನಿರೂಪ್ ಭಂಡಾರಿ ನಾಯಕನಾಗಿ ಆ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿಗೂ ಕೂಡ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ನ ಸಿಕ್ಸರ್ ಬಾರಿಸಿದ್ದರು. ಈಗ ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷ ಗತಿಸಿದೆ. ಚಿತ್ರತಂಡ ಆ ನೆನಪುಗಳ ಯಾನವನ್ನು ನೆನೆದು ಸಂಸತಪಟ್ಟಿದೆ.
ರಂಗಿತರಂಗ ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಎಂಬ ಬಡಾ ಖಬರ್ ವೊಂದು ಸೌತ್ ಟು ನಾರ್ತ್ ಚರ್ಚೆಯಲ್ಲಿದೆ. ಬಿಟೌನ್ ಸ್ಟಾರ್ ನಟರೊಬ್ಬರು ರಂಗಿತರಂಗ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ಅದ್ರಲ್ಲಿಯೂ ಪ್ರಮುಖವಾಗಿ ಕಿಲಾಡಿ ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ.

ರಂಗಿತರಂಗ ಸಿನಿಮಾದ ಹಿಂದಿ ರಿಮೇಕ್ ಬಗ್ಗೆ ಮೊದಲಿನಿಂದಲೂ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಇದೀಗ ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದಾದ ಬಳಿಕ ಕಿಚ್ಚ ಅನೂಪ್ ಜೊತೆಯಾಗಿ ಬಿಲ್ಲರಂಗ ಭಾಷಾ ಸಿನಿಮಾಕ್ಕೆ ಮುನ್ನುಡಿ ಬರೆಯಲಿದ್ದಾರೆ.






