ನಗರದಲ್ಲಿ ಸಂಚಾರ ದಟ್ಟಣೆ ಸಂಬಂಧ ಹತ್ತುಕ್ಕೂ ಅಧಿಕ ಟ್ರಾಫಿಕ್ ಸಾಂದ್ರತೆ ಜಾಗಗಳ ಗುರುತು ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವಾರ ಮೂರು ಜಾಗಗಳಿಗೆ ಭೇಟಿ ನೀಡಲಾಗಿದೆ. ಅದರಲ್ಲಿ ಗೊರಗುಂಟೇಪಾಳ್ಯ, ಹೆಬ್ಬಾಳ, ಕೆಆರ್ ಪುರ ಮುಖ್ಯವಾಗಿದೆ ಎಂದರು.
ನಿನ್ನೆ ರಾತ್ರಿ ಸಿಂಧೂರ ರಸ್ತೆ ಕಡೆಯಿಂದ ಸಾರಕ್ಕಿ ಜಂಕ್ಷನ್ ಕಡೆಯ ರಸ್ತೆಯಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ರಸ್ತೆಯ ನಾಮಫಲಕ, ಬೆಸ್ಕಾಂ ನವರು ಅಳವಡಿಸಿರುವ ಕಾಂಕ್ರೀಟ್ ಹಾಗೂ ಝೀರೋ ಟಾಲರೆನ್ಸ್ ಬೋರ್ಡ್‌ನ್ನು ಸ್ಥಳಾಂತರಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಿ ಎಡಭಾಗಕ್ಕೆ ಹೋಗುವ ವಾಹನಗಳಿಗೆ ಸುಗಮವಾಗಿ ಚಲಿಸಲು ಅವಕಾಶ ಕಲ್ಪಿಸಬೇಕಾಗಿರುತ್ತದೆ. ಬಿಎಂಆರ್ಸಿ ಎಲ್ ಪಿಲ್ಲರ್‌ಗೆ ಅಳವಡಿಸಿರುವ ಸಿಗ್ನಲ್ ಲೈಟ್ ಎತ್ತರವನ್ನು ಇನ್ನೂ ಮೂರು ಅಡಿ ಎತ್ತರಕ್ಕೆ ಎತ್ತರಿಸಬೇಕಿದೆ. ಸಾರಕ್ಕಿ ಸಿಗ್ನಲ್‌ಗೆ ಹೊಂದಿಕೊಂಡಂತಿರುವ ಜೆ.ಪಿ.ನಗರ ಮೆಟ್ರೋ ನಿಲ್ದಾಣದ 14ನೇ ಇ ರಸ್ತೆಯಿಂದ ವಾಹನಗಳು ಪಾದಚಾರಿ ಮಾರ್ಗ ಮುಖೇನ ಕನಕಪುರ ರಸ್ತೆಗೆ ವೇಗವಾಗಿ ಬರುವುದರಿಂದ ಅಪಘಾತಗಳು ಉಂಟಾಗುತ್ತಿವೆ.
ಜಯದೇವ ಮೇಲುಸೇತುವೆ ಈಸ್ಟ್ ಎಂಡ್ ಮುಖ್ಯ ರಸ್ತೆಯ ಕಡೆಗೆ ರೋಡ್ ಸರ್ಪೇಸಿಂಗ್ ಸರಿಪಡಿಸುವ, ವಿದ್ಯುತ್ ದೀಪಗಳನ್ನು ಅಳವಡಿಸುವ, ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಆಗುತ್ತಿದೆ. ಅದಕ್ಕಾಗಿ ಡ್ರೈನೇಜ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಆಡಳಿತಗಾರರು ಮೆಟ್ರೊ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೆಟ್ರೋ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಿದ್ದು, ಕೂಡಲೆ ಅದನ್ನು ಮಾಡಬೇಕು. ಸರ್ವೀಸ್ ರಸ್ತೆಯ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕಿದ್ದು, ಅದನ್ನು ತೆರವುಗೊಳಿಸಲು ಹೇಳಲಾಗಿದೆ ಎಂದರು.

ಬಿ.ಟಿ.ಎಂ ಲೇಔಟ್ – ಸಿಲ್ಕ್ ಬೋರ್ಡ್ ಕಡೆಗೆ ಎರಡು ಬದಿ ಚರಂಡಿ ಹಾಳಾಗಿರುವುದರಿಂದ ಮಳೆ ಬಂದಾಗ ಚರಂಡಿ ನೀರು ಮತ್ತು ಮಳೆ ನೀರು ಒಟ್ಟಾಗಿ ಸೇರಿ ರಾಜಕಾಲುವೆಯಿಂದ ಉಕ್ಕಿ ಹರಿಯುವುದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದ್ದು, ರಾಜಕಾಲುವೆ ವಿಭಾಗದಿಂದ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆಯಾಗುವುದನ್ನು ತಪ್ಪಿಸಲು ಸೂಚನೆ ನೀಡಲಾಗಿದೆ ಎಂದು ಉಲ್ಲೇಖಿಸಿದರು.












