ನಾಳೆಯಿಂದ (ಶುಕ್ರವಾರ) ಜನತಾಮಿತ್ರ ಕಾರ್ಯಕ್ರಮ ರಾಜಧಾನಿಯಲ್ಲಿ ಆರಂಭ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ಮುಖ್ಯ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡದ ಅವರು; ಜನತಾಮಿತ್ರ ಕಾರ್ಯಕ್ರಮಕ್ಕಾಗಿ 15 ವಿಶೇಷ ವಾಹನಗಳನ್ನು ಸಿದ್ಧವಾಗಿವೆ. ಇಡೀ ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರತಿಯೊಂದು ವಾರ್ಡ್ ಗಳಿಗೂ ಹೋಗಲಿರುವ ಈ ವಾಹನಗಳಿಗೆ ನಾಳೆ ಜೆಪಿ ಭವನದಲ್ಲಿ ಹಸಿರು ನಿಶಾನೆ ತೋರಲಾಗುವುದು ಎಂದರು.
ಪಕ್ಷಗಳ ಎಲ್ಲ ಮುಖಂಡರು ಈ ವಾಹನಗಳ ಜತೆ ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚಾರ ನಗರದಲ್ಲಿರುವ ಮಾಡಬೇಕು. ಎಲ್ಲ ವಾರ್ಡ್ ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು. ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್ ಇ ಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನನ್ನನ್ನು ಒಳಗೊಂಡಂತೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಎಲ್ಲ ಪ್ರಮುಖರು ತಮ್ಮ ನೇತೃತ್ವದ ತಂಡಗಳ ಮೂಲಕ ಕ್ಷೇತ್ರಗಳಿಗೂ ಭೇಟಿ ನೀಡಲಿದ್ದೇವೆ. ಈ ವಾಹನಗಳು ಬರುವ ಮುನ್ನ ಆಯಾ ಕ್ಷೇತ್ರಗಳಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಹಾಗೂ ನಾನು ಮುಖ್ಯಮಂತ್ರಿಯಾಗಿ ಬೆಂಗಳೂರು ನಗರಕ್ಕೆ ನೀಡಿದ ಕೊಡುಗೆಗಳ ಮಾಹಿತಿಯನ್ನು ಮನೆಮನೆಗೂ ಮುಟ್ಟಿಸುವುದು ನಮ್ಮ ಉದ್ದೇಶ ಎಂದರು.
ಸದ್ಯ ದೇಶದಲ್ಲಿ ರಾಜ್ಯದಲ್ಲಿ ಇರುವ ಪರಿಸ್ಥಿತಿ. ಬೆಂಗಳೂರಿಗೆ ಯಾರು, ಯಾವ ಕೊಡುಗೆ ಕೊಟ್ಟಿದ್ದಾರೆ ಅನ್ನುವ ದಾಖಲೆ ಕೊಡಲಾಗುತ್ತದೆ. 2008-2013 ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೆಸರಲ್ಲಿ ಹಣದ ಲೂಟಿ ಬಗ್ಗೆ ಜನತೆಯ ಮುಂದೆ 15 ವಾಹನ ಮೂಲಕ ಮಾಹಿತಿ ನೀಡುತ್ತೇವೆ. ಆ ವಾಹನಗಳು ಮುಂದಿನ ಚುನಾವಣೆ ವರೆಗೆ ನಗರದಾದ್ಯಂತ ಸಂಚಾರ ಮಾಡಲಿವೆ. ಆರೂವರೆ ಕೋಟಿ ಜನರ ಸಹಕಾರ ಕೊಡಿ ಎಂದು ಕೇಳುತ್ತೇವೆ. ಜನ ಈಗಾಗಲೇ ನೊಂದಿದ್ದಾರೆ. ಅವರ ಬದುಕಿಗೆ ನಾವು ಸಾಂತ್ವಾನ ಹೇಳಿ ಸಹಾಯ ಮಾಡಬೇಕಿದೆ ಎಂದು ಹೇಳಿದರು.
ಜುಲೈ 17ರಂದು ಸಮಾರೋಪ:
ನಾಳೆಯಿಂದ ಆರಂಭವಾಗಿ ಜುಲೈ 17 ರವರೆಗೂ ಜನತಾ ಮಿತ್ರ ಕಾರ್ಯಕ್ರಮ ನಡೆಯಲಿದೆ. ಜು.1 ರಂದು ಒಂದು ಲಕ್ಷಕ್ಕೂ ಅಧಿಕ ಜನ ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತದೆ. ಬೆಂಗಳೂರು ನಗರದ ಜನತೆಗೆ ಯಾವುದೇ ಸಮಸ್ಯೆ ಆಗದ ರೀತಿ ಕಾರ್ಯಕ್ರಮ ಮಾಡಲಾಗುತ್ತದೆ. ಮೂರ್ನಾಲ್ಕು ದಿನದಲ್ಲಿ ಈ ಬಗ್ಗೆ ತಿರ್ಮಾನವನ್ನು ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.
ಪಂಚರತ್ನ ರಥಯಾತ್ರೆ & ಗ್ರಾಮ ವಾಸ್ತವ್ಯ:
ಜಿಲ್ಲಾ ಘಟಕ ಅಧ್ಯಕ್ಷರು ಹಾಗೂ ಎಲ್ಲ ಶಾಸಕರ ಸಭೆ ಕರೆದಿದ್ದೇವೆ. ಪಕ್ಷದ ಸಂಘಟನೆ ಹಾಗೂ ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲಾಗುತ್ತದೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿದೆ. ಜನತೆಯ ವಿಶ್ವಾಸ ಮೂಡಿಸುವುದು ಹಾಗೂ ನೀರಾವರಿ ಯೋಜನೆ ಕುರಿತು ನಮ್ಮ ಬದ್ದತೆ ಬಗ್ಗೆ ಕಾರ್ಯಕ್ರಮ ಪೂರ್ಣಗೊಂಡದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಗೌರಿಶಂಕರ್, ಮಂಜುನಾಥ್, ಮಾಜಿ ಸಚಿವ ಎನ್.ಬಿ.ನಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.