ಹಲವು ಬಾರಿ ರಸ್ತೆ ಗುಂಡಿ ಮುಚ್ಚುವ ವಿಚಾರವಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಕಿವಿ ಹಿಂಡಿರುವ ಹೈ ಕೋರ್ಟ್ ಇದೀಗ ಮತ್ತೊಮ್ಮೆ ಖಡಕ್ ಆಗಿ ತರಾಟೆಗೆ ತೆಗೆದುಕೊಂಡಿದೆ. ಈಗಾಗಲೇ ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳ ಎಣಿಕೆ ಮಾಡಿ ವರದಿ ಸಲ್ಲಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರೂ ಪಾಲಿಕೆ ಸಮರ್ಪಕ ರೀತಿಯಲ್ಲಿ ವರದಿ ಸಲ್ಲಿಸರಲಿಲ್ಲ. ಅಲ್ಲದೆ ರಸ್ತೆ ಗುಂಡಿ ಮುಚ್ಚಲು ಟ್ರಾಫಿಕ್ ಪೊಲೀಸರ ಸಹಾಯ ಪಡೆದುಕೊಂಡರೂ ರಸ್ತೆ ಗುಂಡಿ ಮುಕ್ತ ಮಾಡಲು ಬಿಬಿಎಂಪಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಇದೀಗ ಇಂದು CJ ರಿತುರಾಜ್ ಆವಸ್ತಿರವರನ್ನು ಒಳಗೊಂಡ ವಿಭಾಗೀಯ ಪೀಠ ತೀವ್ರತರವಾಗಿ ಬಿಬಿಎಂಪಿ ಮುಖ್ಯ ಆಯುಕ್ಯ ತುಷಾರ್ ಗಿರಿನಾಥ್ ಸೇರಿದಂತೆ ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದ ಚೀಫ್ ಇಂಜಿನಿಯರ್ ಪ್ರಹ್ಲಾದ್ ರನ್ನು ತರಾಟೆಗೆ ತೆಗೆದುಕೊಂಡಿದೆ.
ವಿಚಾರಣೆ ವೇಳೆ ಬಿಬಿಎಂಪಿಗೆ CJ ತರಾಟೆ.!!
ಬಿಬಿಎಂಪಿ ಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ರಸ್ತೆ ಮುಚ್ಚುವ ಕಾಮಗಾರಿ ಸಂಬಂಧಪಟ್ಟ ತಂತ್ರಜ್ಞರಿಗೆ ವಹಿಸುವ ಎಚ್ಚರಿಕೆಯನ್ನು ನೀಡಿದೆ. ನ್ಯಾಯಪೀಠದ ತಾಳ್ಮೆಯನ್ನು ಬಿಬಿಎಂಪಿ ಅಧಿಕಾರಿಗಳು ಹೆಚ್ಚು ಪರೀಕ್ಷಿಸಬಾರದು. ಇದು ಹೀಗೆ ಮುಂದುವರೆದರೆ ಬಿಬಿಎಂಪಿ ಮುಖ್ಯ ಆಯುಕ್ತರ ಅಮಾನತಿಗೆ ಆದೇಶಿಸಲಾಗುವುದು. ನಿಮ್ಮ ಚೀಫ್ ಇಂಜಿನಿಯರ್, ಅಧಿಕಾರಿಗಳು ಅಸಮರ್ಥರಿದ್ದಾರೆ ಎಂದು ವಿಭಾಗೀಯ ನ್ಯಾಯಪೀಠ ಪಾಲಿಕೆಯನ್ನು ತೀವ್ರತರದ ತರಾಟೆಗೆ ತೆಗೆದುಕೊಂಡಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ರ ವಿಭಾಗೀಯ ಪೀಠ ಇಂದು ರಸ್ತೆಗುಂಡಿ ಬಗ್ಗೆ ವಿಚಾರಣೆ ತೆಗೆದಿದ್ದು, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದೆ. ಅಲ್ಲದೆ ಜೂನ್ 30 ರಂದು ಬಿಬಿಎಂಪಿ ಮುಖ್ಯ ಆಯುಕ್ತರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು. ಜೊತೆಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ಕೂಡ ನ್ಯಾಯಾಲಯಕ್ಕೆ ಆಗಮಿಸಬೇಕು ಎಂದು ಹೇಳಿದೆ. ಬಿಬಿಎಂಪಿಗೆ ಕೊನೆಯ ಅವಕಾಶ ನೀಡುತ್ತಿದ್ದೇವೆ. ಆದೇಶ ಪಾಲಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ. ಪಾಲಿಕೆ ಕಚೇರಿಯಲ್ಲಿ ಆರಾಮವಾಗಿ ಕೂರಲು ಬಿಡುವುದಿಲ್ಲ. ಜೂನ್ 30 ರಂದು ಕಾರ್ಯಾದೇಶ, ಸರ್ವೆ ವರದಿ ಸಲ್ಲಿಸಲು ಅಂತಿಮ ಗಡುವು ನೀಡಿ ನ್ಯಾಯಾಲಯ ತಾಕೀತು ಮಾಡಿದೆ.