ಶುಕ್ರವಾರ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ೫ ಪಂದ್ಯಗಳ ಟೆಸ್ಟ್ ಸರಣಿ 2-2ರಿಂದ ಸಮಬಲಗೊಂಡಿದೆ. ಕೊನೆಯ ಪಂದ್ಯ ಕೊರೊನಾ ವೈರಸ್ ಅಬ್ಬರದಿಂದ ಮುಂದೂಡಲಾಗಿತ್ತು. ಬಾಕಿ ಉಳಿದ ಒಂದು ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಸರಣಿ ಗೆಲುವು ನಿರ್ಧಾರವಾಗಲಿದೆ.
ಎಡ್ಜ್ ಬಸ್ಟನ್ ನಲ್ಲಿ ಶುಕ್ರವಾರ ಆರಂಭಗೊಳ್ಳಲಿರುವ ಈ ಪಂದ್ಯದಲ್ಲಿ ಭಾರತ ತಂಡ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವುದರಿಂದ ಅವರು ಚೇತರಿಸಿಕೊಳ್ಳುವ ಬಗ್ಗೆ ಅನುಮಾನವಿದೆ.
ರೋಹಿತ್ ಶರ್ಮ ಒಂದು ವೇಳೆ ಆಡದೇ ಇದ್ದರೆ ತಂಡವನ್ನು ಮುನ್ನಡೆಸುವುದು ಯಾರು? ಆರಂಭಿಕನಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಕಾಡತೊಡಗಿದೆ.
ಹಂಗಾಮಿ ನಾಯಕರಾದ ಕೆಎಲ್ ರಾಹುಲ್ ಕೂಡ ಈ ಪಂದ್ಯದಲ್ಲಿ ಆಡುತ್ತಿಲ್ಲ. ರಿಷಭ್ ಪಂತ್ ಟಿ-20ಗೆ ಅಷ್ಟೇ ಸೀಮಿತರಾಗಿದ್ದಾರೆ. ಹಾಗಾಗಿ ಹಿಂದಿನ ಇಂಗ್ಲೆಂಡ್ ಸರಣಿಯನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಇದೇ ವೇಳೆ ಆರಂಭಿಕನಾಗಿ ಮಯಾಂಕ್ ಅಗರ್ ವಾಲ್ ತಂಡವನ್ನು ಸೇರಿಕೊಂಡಿದ್ದು, ಮಯಾಂಕ್ ಅಲ್ಲದೇ, ಚೇತೇಶ್ವರ್ ಪೂಜಾರ ಮತ್ತು ಭರತ್ ಮೂವರ ನಡುವೆ ಪೈಪೋಟಿ ಇದ್ದು, ಯಾರು ಅಂತಿಮವಾಗಿ ಆರಂಭಿಕನಾಗಿ ಕಣಕ್ಕಿಳಿಯುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.