ನಾಯಕಿ ಚಾಮರೈ ಅಟ್ಟಪಟ್ಟು ಅಜೇಯ ಅರ್ಧಶತಕದ ನೆರವಿನಿಂದ ಶ್ರೀಲಂಕಾ ವನಿತೆಯರ ತಂಡ 7 ವಿಕೆಟ್ ಗಳಿಂದ ಭಾರತ ವನಿತೆಯರ ತಂಡವನ್ನು ಮಣಿಸಿತು. ಈ ಮೂಲಕ ತವರಿನಲ್ಲಿ ಭಾರತ ತಂಡವನ್ನು ಮೊದಲ ಬಾರಿ ಸೋಲಿಸಿದ ದಾಖಲೆ ಬರೆಯಿತು.
ಡಂಬುಲಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 138 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಶ್ರೀಲಂಕಾ ವನಿತೆಯರ ತಂಡ 17 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈಗಾಗಲೇ ಟಿ-20 ಸರಣಿಯಲ್ಲಿ ಸೋತಿರುವ ಶ್ರೀಲಂಕಾ ತಂಡ ಇದೇ ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಗೆಲುವಿನ ದಾಖಲೆ ಬರೆಯಿತು.
ಶ್ರೀಲಂಕಾ ಪರ ನಾಯಕಿ ಚಾಮರೈ ಅಟ್ಟಪಟ್ಟು 48 ಎಸೆತಗಳಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ ಅಜೇಯ 80 ರನ್ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ನೀಲಾಕ್ಷಿ ಡಿಸಿಲ್ವಾ (30) ಉತ್ತಮ ಬೆಂಬಲ ನೀಡುವ ಮೂಲಕ ನಾಯಕಿಗೆ ಉತ್ತಮ ಬೆಂಬಲ ನೀಡಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು. ತಂಡದ ಪರ ನಾಯಕಿ ಹರ್ಮನ್ ಪ್ರೀತ್ ಸಿಂಗ್ (ಅಜೇಯ 39), ಜಾಮಿಯಾ ರೋಡ್ರಿಗಜ್ (33) ತಂಡವನ್ನು ಆಧರಿಸಿದರು.