ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿ ದೆಹಲಿಯಲ್ಲಿ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಹಾಗು ರಾಜ್ಯ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ನರೇಂದ್ರ ಮೋದಿ ನೇತತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ದ ಇಡಿ ವಿಚಾರಣೆ ನೆಪದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
‘ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ, ಪೂರ್ವಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಎಐಸಿಸಿ ಕಚೇರಿ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಅದರ ಬಗ್ಗೆಯೂ ಅರಿವಿದೆ ಎಂದು ಹೇಳಿದ್ದಾರೆ

ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಅದೇ ರೀತಿ ಎಲ್ಲರಿಗೂ ರಾಜಕೀಯದಲ್ಲಿ ದಿನಗಳು ಬದಲಾಗುತ್ತವೆ. ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ. ಏನೇ ಆದರೂ ನಾವು ನಮ್ಮ ನಾಯಕರ ಜತೆ ಇರುತ್ತೇವೆ, ಕಷ್ಟಕಾಲದಲ್ಲಿ ಅವರ ಜತೆ ನಿಂತು, ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸಂಸದರಾದ ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಎಲ್. ಹನುಮಂತಯ್ಯ, ಮುಖಂಡರಾದ ನಾಗರಾಜ್ ಛಬ್ಬಿ, ವಿನಯ್ ಕಾರ್ತಿಕ್, ಕೆಜಿಎಫ್ ಬಾಬು ಉಪಸ್ಥಿತರಿದ್ದರು.
