ಈ ವರ್ಷದ ಫೆಬ್ರವರಿ ತಿಂಗಳ ದಿ ವೈರ್ ವೆಬ್ ಪತ್ರಿಕೆಯಲ್ಲಿ ಭಾರತ ಒಕ್ಕೂಟದ ಮಾಜಿ ಗೃಹ ಕಾರ್ಯದರ್ಶಿ ಡಾ. ಮಾಧವ ಗೋಡಬೊಲೆ ಅವರು “ಹಿಂದುತ್ವ ಆಂಡ್ ಸ್ಟೆಡಿ ಪಾಲಿಟಿಸೈಜೇಷನ್ ಆಫ್ ರಿಲಿಜಿಯನ್” ಶಿರ್ಷಿಕೆಯುಳ್ಳ ತಮ್ಮ ಲೇಖನದಲ್ಲಿ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ಹಿಂದುತ್ವದ ಹೆಸರಿನಲ್ಲಿ ಧರ್ಮವನ್ನು ರಾಜಕೀಕರಣಗೊಳಿಸಿರುವ ಸಂಗತಿಯ ಮೇಲೆ ಬೆಳಕು ವಿವರವಾದ ಚೆಲ್ಲಿದ್ದಾರೆ. ಡಾ. ಮಾಧವ್ ಗೋಡಬೊಲೆ ಅವರು ಇತ್ತೀಚಿಗೆ “ಇಂಡಿಯಾ – ಎ ಫೆಡರಲ್ ಯುನಿಯನ್ ಆಫ್ ಸ್ಟೇಟ್ಸ್ : ಫಾಲ್ಟ್ ಲೈನ್ಸ್ ˌ ಚಾಲೆಂಜಸ್ ಆಂಡ್ ಅಪಾರ್ಚ್ಯೂನಿಟೀಸ್” ಎಂಬ ಗ್ರಂಥವನ್ನು ರಚಿಸಿದ್ದಾರೆ. ಅವರು ದಿ ವೈರ್ ಜರ್ನಲ್ಲಿನಲ್ಲಿ ಬರೆದ ಲೇಖನವನ್ನು ಆಧಾರವಾಗಿಟ್ಟುಕೊಂಡು ನಾನು ಇಲ್ಲಿ ಬಿಜೆಪಿ ಮತ್ತು ಸಂಘ ಮಾಡುತ್ತಿರುವ ರಾಜಕೀಯದಲ್ಲಿ ಧರ್ಮದ ದುರ್ಬಳಕೆಯ ಕುರಿತು ಚರ್ಚಿಸಿದ್ದೇನೆ.
ವಿ ಡಿ ಸಾವರಕರ್ ೧೯೨೫ ರಲ್ಲಿ ಹುಟ್ಟುಹಾಕಿದ ಹಿಂದುತ್ವ ಸಿದ್ದಾಂತದ ಮತಾಂಧ ಬೇರುಗಳು ಈಗ ಈ ಮಣ್ಣಿನ ಆಳಕ್ಕೆ ಇಳಿದಿವೆ. ಅದರಿಂದ ಭಾರತದ ಬಹುತ್ವ ಪರಂಪರೆಗೆ ಆಗುತ್ತಿರುವ ತೀವ್ರ ಹಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂದು ಭಾರತದ ಜಾಗೃತ ಮತದಾರರು ದೇಶದ ಜಾತ್ಯತೀತ ರಾಜಕೀಯ ಪಕ್ಷಗಳಿಗೆ ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗು ಆ ದಿಶೆಯಲ್ಲಿ ಪ್ರತಿಜ್ಞೆ ಮಾಡುವಂತೆ ಒತ್ತಾಯಿಸಬೇಕಾಗ ಕಾಲ ಬಂದಿದೆ ಎಂದು ಡಾ. ಗೋಡಬೊಲೆ ಅಭಿಪ್ರಾಯ ಪಟ್ಟಿದ್ದಾರೆ. ಸಾವರಕರ್ ಮತ್ತು ಜಿನ್ನಾ ಇಬ್ಬರೂ ಅಜ್ಞೇಯತಾವಾದಿಗಳಾಗಿದ್ದು, ಇತಿಹಾಸದ ಹಾದಿಯನ್ನು ಬದಲಾಯಿಸಲು ತಮ್ಮತಮ್ಮ ಧರ್ಮಗಳನ್ನು ಬಹಳ ಚತುರತೆಯಿಂದ ಬಳಸಿಕೊಂಡವರು. ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವು ಅಂದು ಭಾರತದ ವಿಭಜನೆಗೆ ಕಾರಣವಾದರೆ ಸಾವರಕರ್ ಅವರ ಹಿಂದುತ್ವ ಸಿದ್ಧಾಂತವು ಇಂದು ಭಾರತದ ಬಹುತ್ವ, ಬಹು-ಧಾರ್ಮಿಕ, ಬಹು-ಭಾಷಿಕ, ಬಹು-ಜನಾಂಗೀಯ ಸಮಾಜವನ್ನು ವಿಘಟಿಸುತ್ತಿದೆ ಎನ್ನುತ್ತಾರೆ ಡಾ. ಗೋಡಬೊಲೆ.
ಸ್ವಾಮಿ ವಿವೇಕಾನಂದರು ೧೮೯೩ ರ ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ “ಜಗತ್ತಿಗೆ ಸಹಿಷ್ಣುತೆ ಮತ್ತು ಎಲ್ಲರನ್ನು ಒಳಗೊಳ್ಳುವಿಕೆ ಕಲಿಸಿದ ಧರ್ಮಕ್ಕೆ ಸೇರಿದವನಾಗಿದ್ದೇನೆ ಎಂದು ನಾನು ಹೆಮ್ಮೆಪಡುತ್ತೇನೆ. ಭಗವದ್ಗೀತೆಯ ಸಿದ್ಧಾಂತವು ‘ಯಾರು ನನ್ನ ಬಳಿಗೆ ಬರುವರೊ, ನಾನು ಅವನನ್ನು ತಲುಪುತ್ತೇನೆ; ಮನುಷ್ಯರೆಲ್ಲರು ಅಂತಿಮವಾಗಿ ನನ್ನನ್ನೇ ಸೇರುತ್ತಾರೆ’ ಎನ್ನುತ್ತದೆ. ಪಂಥೀಯವಾದˌ ಧರ್ಮಾಂಧತೆˌ ಮತಾಂಧತೆ ಮತ್ತು ಅದರ ಭಯಾನಕ ವಂಶಸ್ಥರು ಈ ಸುಂದರ ಭೂಮಿಯನ್ನು ದೀರ್ಘಕಾಲದಿಂದ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಈ ಭೂಮಿಯಲ್ಲಿ ಮತಾಂಧರು ಹಿಂಸೆಯನ್ನು ತುಂಬಿದ್ದಾರೆ. ಕಾಲಕಾಲಕ್ಕೆ ತಮ್ಮ ರಕ್ತಪಾತದ ಮೂಲಕ ಈ ಮಣ್ಣನ್ನು ರಕ್ತದಲ್ಲಿ ಮುಳುಗಿಸಿದ್ದಾರೆ, ನಾಗರಿಕತೆಯನ್ನು ನಾಶಪಡಿಸಿ ಇಡೀ ಜಗತ್ತನ್ನು ಹತಾಶೆಗೆ ದೂಡಿದ್ದಾರೆ” ಎಂದಿದ್ದನ್ನು ಉದಾಹರಿಸಿದ ಡಾ. ಗೋಡಬೊಲೆˌ ಒಂದು ಕಡೆ ವಿವೇಕಾನಂದರನ್ನು ಹಿಂದೂ ಸನ್ಯಾಸಿ ಎಂದು ಬಿಂಬಿಸುವ ಮತಾಂಧರು ಮತ್ತೊಂದು ಕಡೆ ಅವರ ಉದಾತ್ ತತ್ವಗಳನ್ನು ತಿರುಚಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದನ್ನು ವಿವರಿಸಿದ್ದಾರೆ.
ಭಾರತೀಯ ಧಾರ್ವಿುಕ ಕ್ಷೇತ್ರವು ಸದಾ ವಿಶ್ವದೃಷ್ಟಿಯನ್ನು ಹೊಂದಿದ್ದು ಅದು ವಸುಧೈವ ಕುಟುಂಬಕಂ ಎನ್ನುವ ಮಂತ್ರ ಪಟಿಸಿದೆ. ಋಗ್ವೇದದ ಪ್ರಕಾರ ಸತ್ಯ ಒಂದೇ ಆಗಿರುತ್ತದೆˌ ಆದರೆ ಬುದ್ಧಿವಂತರು ಅದನ್ನು ವಿವಿಧ ರೀತಿಯಲ್ಲಿ ಅರ್ಥೈಸುತ್ತಾರೆ. ಭಾರತದ ಈ ಗತ ವೈಭವವನ್ನು ನಮಗೆ ಬಿಜೆಪಿ ಆಗಗ ನೆನಪಿಸುತ್ತಲೆ ತಾನು ಮಾತ್ರ ಈ ಉದಾತ್ ತತ್ವಗಳಂತೆ ನಡೆದುಕೊಳ್ಳುತ್ತಿಲ್ಲ ಎಂಬುದು ಡಾ. ಗೋಡಬೊಲೆ ಅವರ ಅಭಿಪ್ರಾಯವಾಗಿದೆ. ‘ಹಿಂದುತ್ವ’ ಎಂದರೆ ಹಿಂದೂ ಧರ್ಮದ ಸಾರ ಎಂದು ಬಹಳಷ್ಟು ಜನರು ತಪ್ಪು ತಿಳಿದುಕೊಂಡಿದ್ದಾರೆ ಅಥವಾ ಬಿಜೆಪಿ ಮತ್ತು ಸಂಘ ಹಾಗೆ ಬಿಂಬಿಸಿವೆ. ಆದರೆ, ಬಿಜೆಪಿ ಮತ್ತು ಸಂಘಕ್ಕೆ ಅದೊಂದು ರಾಜಕೀಯ ಸಿದ್ಧಾಂತವಾಗಿದೆ. ಅದನ್ನು ಸಾವರ್ಕರ್ ಹೀಗೆ ಬರೆದಿದ್ದರು: “ಮಹಮ್ಮದೀಯರು ಅಥವಾ ಕ್ರಿಶ್ಚಿಯನ್ ದೇಶವಾಸಿಗಳು ಅರೇಬಿಯಾ ಅಥವಾ ಪ್ಯಾಲೆಸ್ತೀನ್‌ನಲ್ಲಿ ತಮ್ಮ ಪವಿತ್ರ ಭೂಮಿ ದೂರದಲ್ಲಿದೆ ಎಂದು ಭಾವಿಸುತ್ತಾರೆ. ಅವರ ಪುರಾಣಗಳು, ಕಲ್ಪನೆಗಳು ಮತ್ತು ಅವರು ವಿಜ್ರಂಭಿಸುವ ವೀರರು ಈ ಮಣ್ಣಿನ ಮಕ್ಕಳಲ್ಲ. ಸಿಂಧೂವಿನಿಂದ ಸಿಂಧೂವರೆಗೆ ಮತ್ತು ಸಿಂಧೂನಿಂದ ಸಮುದ್ರದವರೆಗೆ ಇದು ಹಿಂದೂಗಳ ಪೂರ್ವಜರ ಭೂಮಿ ಮತ್ತು ಇದು ಹಿಂದೂಗಳ ಪಿತೃಭೂಮಿಯಾಗಿ ವಿಸ್ತಾರ ಪಡೆದಿದೆ.” ಸಾವರಕರ್ ಅವರ ಹಿಂದುತ್ವ ಸಿದ್ಧಾಂತವನ್ನು ಡಾ. ಗೋಡಬೊಲೆ ಇಲ್ಲಿ ಉಲ್ಲೇಖಿಸಿದ್ದಾರೆ.

ಹಿಂದುತ್ವ ಮತ್ತು ಹಿಂದೂ ಧರ್ಮದ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಸಾವರ್ಕರ್ ಹೀಗೆ ವಿವರಿಸಿದ್ದಾರೆ: “ಹಿಂದೂತ್ವವು ಹಿಂದೂ ಧರ್ಮದೊಂದಿಗೆ ಯಾವುದೆ ಸಂಬಂಧ ಹೊಂದಿಲ್ಲ.” ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಥಾಟ್ಸ್ ಆನ್ ಪಾಕಿಸ್ತಾನ್ ಎಂಬ ಪುಸ್ತಕದಲ್ಲಿ ಸಾವರಕರ್ ಮೊಟ್ಟ ಮೊದಲು “ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಒಂದು ವರ್ಗೀಯ ಪ್ರತಿಪಾದನೆಯನ್ನು ಮಾಡುವ ಮೂಲಕ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಮುನ್ನುಡಿ ಬರೆದರು” ಎಂದು ಹೇಳಿದ್ದಾರೆ. ೧೯೩೭ ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಸಾವರ್ಕರ್ ಮಾತನಾಡುತ್ತಾ ಹೀಗೆ ಹೇಳಿದ್ದರು: “ಭಾರತವು ಇಂದು ಮುಖ್ಯವಾಗಿ ಹಿಂದೂಗಳು ಮತ್ತು ಮುಸ್ಲಿಮರು ಎಂದ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಒಡೆದಿದೆ.” ಸಾವರಕರ್ ಅವರ ಈ ಮಾತನ್ನು ಉಲ್ಲೇಖಿಸುತ್ತಾ ಡಾ. ಗೋಡಬೊಲೆಯವರು ಅವರ ಹಿಂದುತ್ವ ಸಿದ್ಧಾಂತವು ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ ಎನ್ನುವುದನ್ನು ಮಾರ್ಮಿಕವಾಗಿ ವರ್ಣಿಸಿದ್ದಾರೆ. ಅಲ್ಪಸಂಖ್ಯಾತರ ಮೆಲೆ ಬಹುಸಂಖ್ಯಾತ ಹಿಂದೂಗಳ ಇಂದಿನ ದಬ್ಬಾಳಿಕೆಯನ್ನು ನೋಡಿದಾಗ ಸಹಜವಾಗಿ ದ್ವಿರಾಷ್ಟದ ಬೇಡಿಕೆಯ ಹಿಂದಿನ ಜಿನ್ನಾ ಅವರ ಅಂದಿನ ಭಯದ ಮೂಲವನ್ನು ಊಹಿಸಬಹುದಾಗಿದೆ ಎನ್ನುತ್ತಾರೆ ಡಾ. ಗೋಡಬೊಲೆ.
ಈ ಹಿನ್ನೆಲೆಯಲ್ಲಿ ೧೯೯೫ ರ ಡಿಸೆಂಬರ್ ೧೧ ರಂದು ಡಾ.ರಮೇಶ್ ಯಶವಂತ ಪ್ರಭು ವರ್ಸಸ್ ಪ್ರಭಾಕರ ಕಾಶಿನಾಥ್ ಕುಂಟೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಅರ್ಥೈಸುವುದು ಕಷ್ಟದ ಕೆಲಸ. ‘ಹಿಂದೂ’, ‘ಹಿಂದುತ್ವ’ ಮತ್ತು ‘ಹಿಂದೂ ಧರ್ಮ’ ಎಂಬ ಪದಗಳಿಗೆ ನಿಖರವಾದ ಅರ್ಥವನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಅಂದು ಹೇಳಿತ್ತು. ಆ ತೀರ್ಪಿನಲ್ಲಿ ನ್ಯಾಯಾಲಯವು ‘ಹಿಂದುತ್ವ’ ಮತ್ತು ‘ಹಿಂದೂ ಧರ್ಮ’ ಪದಗಳನ್ನು ಸಂಕುಚಿತವಾಗಿ ಅರ್ಥೈಸುವ ಅಗತ್ಯವಿಲ್ಲ ಮತ್ತು ‘ಹಿಂದುತ್ವ’ ಎಂಬ ಪದವು ಉಪಖಂಡದ ಜನರ ಜೀವನ ವಿಧಾನಕ್ಕೆ ಹೆಚ್ಚು ಸಂಬಂಧಿಸಿದೆ ಎಂದು ಹೇಳಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮ್ ಮಾಧವ್ ಅವರು ತಮ್ಮ ೨೦೨೧ ರ ಪುಸ್ತಕ, ದಿ ಹಿಂದುತ್ವ ಮಾದರಿಯಲ್ಲಿ, ನ್ಯಾಯಾಲಯದ ಅಂದಿನ ತೀರ್ಪನ್ನು ತಿರುಚುತ್ತ ಜಗತ್ತಿನ ಎಲ್ಲ ಧರ್ಮಗಳು ‘ಜೀವನದ ಮಾರ್ಗ’ ವನ್ನೆ ಪ್ರತಿಪಾದಿಸುತ್ತವೆ ಎಂದಿದ್ದಾರೆ. ಮಧ್ಯ ಏಷಿಯಾದ ಸೆಮಿಟಿಕ್ ಧರ್ಮಗಳು ಮತ್ತು ಭಾರತದ ಬೌದ್ಧ, ಜೈನ, ಸಿಖ್ ಮತ್ತು ವೈದಿಕ ಹಿಂದೂ ಧರ್ಮಗಳೂ ಕೂಡ ಜೀವನ ಮಾರ್ಗವನ್ನೆ ಭೋದಿಸಿವೆ. ಹಾಗಾಗಿˌ ಹಿಂದೂ ಒಂದು ಧರ್ಮವಲ್ಲ ಎಂದಾದರೆ ಉಳಿದ ಧರ್ಮಗಳೂ ಕೂಡ ಧರ್ಮವಾಗಲು ಅರ್ಹವಾಗಿಲ್ಲ. ಹಾಗಾಗಿˌ ಜಗತ್ತಿನ ಎಲ್ಲ ಧರ್ಮಗಳು ಕೇವಲ ಆರಾಧನೆಯ ವಿಧಾನಗಳಿಗೆ ಸಿಮಿತವಾಗದೆ ಅವು ಆಯಾ ಧರ್ಮಿಯರ ಜೀವನದ ಮಾರ್ಗಗಳಾಗಿವೆ ಎಂದು ಪ್ರತಿಪಾದಿಸಿದ್ದನ್ನು ಡಾ. ಗೋಡಬೊಲೆ ಉಲ್ಲೇಖಿಸಿದ್ದಾರೆ.
ಹಿಂದುತ್ವವಾದಿಗಳು ನ್ಯಾಯಾಲಯದ ಈ ತೀರ್ಪನ್ನು ತಮ್ಮ ಮನಸ್ಸಿಗೆ ಬಂದಂತೆ ಅರ್ಥೈಸುತ್ತಾ ‘ಹಿಂದುತ್ವ’ ಎಂಬ ಪದವನ್ನು ‘ಭಾರತೀಕರಣ’ದ ಸಮಾನಾರ್ಥಕವಾಗಿ ಬಳಸಲಾಗಿದೆ ಎನ್ನುತ್ತಿದ್ದಾರೆ. ಹಾಗಾಗಿ ಈ ತೀರ್ಪು ಹೆಚ್ಚು ಗೊಂದಲನ್ನು ಸೃಷ್ಟಿಸಿದೆ. ಅದಷ್ಟೆ ಅಲ್ಲದೆ ಇದು ದೇಶದಲ್ಲಿ ಜೊತೆಜೊತೆಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಬಹು ಸಂಸ್ಕೃತಿಗಳ ನಡುವಿನ ವ್ಯತ್ಯಾಸಗಳನ್ನು ಅಳಿಸಿಹಾಕುವ ಮೂಲಕ ಏಕರೂಪ ಸಂಸ್ಕೃತಿಯ ಹೇರುವಿಕೆಗೆ ಇದು ಆಸ್ಪದ ನೀಡುತ್ತದೆ ಎನ್ನುತ್ತಾರೆ ಡಾ. ಗೋಡಬೊಲೆ. ತಮ್ಮ ೨೦೧೬ ರಲ್ಲಿ ಪ್ರಕಟವಾದ ಸೆಕ್ಯುಲರಿಸಂ – ಇಂಡಿಯಾ ಅಟ್ ಎ ಕ್ರಾಸ್ ರೋಡ್ಸ್ ಗ್ರಂಥದಲ್ಲಿ ಬರೆದದ್ದನ್ನು ಡಾ. ಗೋಡಬೊಲೆ ಉಲ್ಲೇಖಿಸುತ್ತಾ “ಇದು ದೇಶದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತುಗಳನ್ನು ಅಳಿಸಿಹಾಕುವ ಭಯವನ್ನು ಉಂಟುಮಾಡುತ್ತದೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲೇಖಕರ ಈ ಭಯವು ಇಂದು ನಿಜವಾಗಿದೆ ಕೂಡ. ಇಂದು ಬಿಜೆಪಿ ಮತ್ತು ಸಂಘ ಈ ದೇಶದ ಜೀವಾಳವಾಗಿರುವ ಬಹು ಸಂಸ್ಕೃತಿಯನ್ನು ನಾಶಗೊಳಿಸುವ ಕೃತ್ಯದಲ್ಲಿ ತೊಡಗಿದ್ದನ್ನು ನಾವು ನೋಡುತ್ತಿದ್ದೇವೆ.
ಸಂವಿಧಾನದ ಮೂಲ ರಚನೆಯ ಭಾಗವಾಗಿ ಜಾತ್ಯತೀತತೆಯನ್ನು ಸರ್ವೋಚ್ಛ ನ್ಯಾಯಾಲಯ ಘೋಷಿಸಿದೆ, ಆದರೆ ೧೯೯೫ ರ ನ್ಯಾಯಾಲಯದ ತೀರ್ಪು ಇದಕ್ಕೆ ವ್ಯತಿರಿಕ್ತ ಮತ್ತು ಅಷ್ಟೇ ಆಘಾತಕಾರಿಯಾಗಿದೆ. ಅಂದು ಶಿವಸೇನೆ ಮತ್ತು ಬಿಜೆಪಿ ಉಭಯ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗಾಗಿ ಮತ ಹಾಕುವಂತೆ ಮಾಡಿದ ಮನವಿಯಲ್ಲಿ ‘ಮೊದಲ ಹಿಂದೂ ರಾಜ್ಯವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಲಾಗುವುದು’ ಎಂದು ಹೇಳಿದ್ದವು. ಈ ಮನವಿಯು ಧರ್ಮಾಧಾರಿತ ಮನವಿಯಲ್ಲ ಎಂದಿರುವ ನ್ಯಾಯಾಲಯದ ತೀರ್ಪಿನಲ್ಲಿರುವ ವೈರುಧ್ಯವನ್ನು ಇಂದು ಸರಿಪಡಿಸಬೇಕಾಗಿದೆ. ಮೇಲ್ಕಂಡ ಚುನಾವಣಾ ಪ್ರಕರಣದಲ್ಲಿನ ಮೇಲ್ಮನವಿ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಈ ತಪ್ಪನ್ನು ಸರಿಪಡಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ನ್ಯಾಯಾಲಯವು ತನ್ನ ವಿಚಾರಣೆಯನ್ನು ಕೇವಲ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದಕ್ಕೆ ಸೀಮಿತಗೊಳಿಸಿತು. ಈಗ ಈ ಸಮಸ್ಯೆಯನ್ನು ನ್ಯಾಯಾಲಯ ಪರಿಹರಿಸುವ ಸಮಯ ಬಂದಿದೆ. ಇಲ್ಲದಿದ್ದರೆ, ಭಾರತದ ಜಾತ್ಯತೀತ ತತ್ವದ ಭವಿಷ್ಯವು ಗಂಭೀರ ಅಪಾಯಕ್ಕೆ ಸಿಲುಕಲಿದೆ. ಭಾರತವು ಎಷ್ಟು ದಿನ ಜಾತ್ಯತೀತ ರಾಷ್ಟ್ರವಾಗಿ ಮುಂದುವರಿಯುತ್ತದೆ ಎಂಬ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಸ್ವತಃ ಕೆಲವು ದಿನಗಳ ಹಿಂದೆ ಅನುಮಾನ ವ್ಯಕ್ತಪಡಿಸಿದ್ದನ್ನು ಡಾ. ಗೋಡಬೊಲೆ ಉಲ್ಲೇಖಿಸಿದ್ದಾರೆ.

ಮೇಲೆ ಸಂಕ್ಷಿಪ್ತವಾಗಿ ಉಲ್ಲೇಖಿಸಲಾದ ಹಿಂದೂ ಧರ್ಮದ ತತ್ವ ಸಿದ್ಧಾಂತಗಳು ಮತ್ತು ವಿಶ್ವ ದೃಷ್ಟಿಕೋನವನ್ನು ನೋಡುವಾಗ, ಡಿಸೆಂಬರ್ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಎಂದು ಕರೆಯಲ್ಪಡುವ ಸಮಾವೇಷದಲ್ಲಿ ನಡೆದದ್ದನ್ನು ನೋಡಿದರೆ ಈ ಸಿದ್ದಾಂತವೆ ಹಾಸ್ಯಾಸ್ಪದವೆನ್ನಿಸುತ್ತದೆ. ಈ ಸಮ್ಮೇಳನದಲ್ಲಿ ಅತಿ ಹೆಚ್ಚು ಪ್ರಚೋದನಕಾರಿ ಕೋಮು ಭಾಷಣಗಳನ್ನು ಮಾಡಲಾಗಿತ್ತು ಮತ್ತು ಭಾರತೀಯ ಮುಸ್ಲಿಮರ ನರಮೇಧಕ್ಕಾಗಿ ಕರೆ ಕೂಡ ನೀಡಲಾಗಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವವರೆಗೂ ಸಂಬಂಧಿಸಿದವರನ್ನು ಇಲ್ಲಿನ ಆಡಳಿತ ವ್ಯವಸ್ಥೆ ಬಂಧಿಸದಿದ್ದದ್ದು ಇನ್ನೂ ಆಘಾತಕಾರಿ ಸಂಗತಿಯಾಗಿತ್ತು. ಅದಷ್ಟೆ ಅಲ್ಲದೆ ಈ ಪ್ರಚೋದನಕಾರಿ ಭಾಷಣಗಳ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಉನ್ನತ ಮಟ್ಟದ ನಾಯಕರ ಕಿವುಡ ಮೌನವು ಕೂಡ ಹೆಚ್ಚು ಆಘಾತಕಾರಿಯಾಗಿತ್ತು. ಯುಪಿ ಚುನಾವಣೆಯ ಸಂದರ್ಭದಲ್ಲಿ ೮೦% ಹಿಂದೂ ವರ್ಸಸ್ ೨೦% ಮುಸ್ಲಿಮ್ ಎನ್ನುವಂತೆ ಮತದಾರರನ್ನು ವಿಘಟಿಸುವ ಮಾತನಾಡಿದ್ದ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಹಿಂದುತ್ವದ ದ್ವೇಷ ರಾಜಕಾರಣದ ಮೂಲಕ ರಾಜಕೀಯ ಧ್ರುವೀಕರಣಕ್ಕಾಗಿ ಬಿಜೆಪಿ ಮತ್ತು ಸಂಘದ ನಿರಂತರ ಪ್ರಯತ್ನವನ್ನು ಸಾಕ್ಷೀಕರಿಸುತ್ತದೆ.
ಬಿಜೆಪಿ ಮತ್ತು ಸಂಘದ ಇತ್ತೀಚಿನ ಎಲ್ಲ ಬಗೆಯ ನಡೆಗಳನ್ನು ಗಮನಿಸಿದಾಗ ಇವು ಹಿಂದೂ ರಾಷ್ಟ್ರವಾಗುತ್ತ ಭಾರತದ ಅನಿವಾರ್ಯ ನಡಿಗೆಯ ಅತ್ಯಂತ ಗೊಂದಲದ ಸಂಕೇತಗಳಾಗಿ ಗೋಚರಿಸುತ್ತವೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷಗಳು ಬಾಕಿ ಇದೆ. ಸಂವಿಧಾನ ಸಭೆ (ಶಾಸಕಾಂಗ) ಅಂಗೀಕರಿಸಿದ ನಿರ್ಣಯದ ಹೊರತಾಗಿಯೂ ಬಿಜೆಪಿ ಮತ್ತು ಸಂಘ ಆ ಸಂವಿಧಾನ ಸಭೆಯ ಆ ನಿರ್ಣಯವನ್ನು ಪ್ರಜ್ಞಾಪೂರ್ವಕವಾಗಿ ಬದಿಗೊತ್ತುತ್ತಿವೆ. ರಾಜಕೀಯದಿಂದ ಧರ್ಮವನ್ನು ಬೇರ್ಪಡಿಸುವ ಗುರಿಯನ್ನು ಸಾಧಿಸುವ ಸಲುವಾಗಿ ಜಾಗೃತ ಮತದಾರರು ಜಾತ್ಯತೀತ ರಾಜಕೀಯ ಪಕ್ಷಗಳ ಮೇಲೆ ಒತ್ತಡವನ್ನು ಹೇರುವ ಮೂಲಕ ಅವುಗಳಿಂದ ಪ್ರತಿಜ್ಞೆ ಮಾಡಿಸುವ ಗುರುತರವಾದ ಕಾರ್ಯ ಈಗ ಮಾಡಬೇಕಿದೆ. ಇಲ್ಲದಿದ್ದರೆ ಧಾರ್ಮಿಕ ದ್ವೇಷದಿಂದ ಮಧ್ಯ ಪ್ರಾಚ್ಯದ ಮುಸ್ಲಿಮ್ ರಾಷ್ಟ್ರಗಳು ಹೇಗೆ ವಿಚ್ಛಿದ್ರಕಾರಿಯಾಗಿ ಸರ್ವನಾಶದತ್ತ ಸಾಗಿವೆಯೊ ಹಾಗೆ ಭಾರತವು ಕೂಡ ಸಾಗುವುದರಲ್ಲಿ ಅನುಮಾನವೆ ಇಲ್ಲ. ಈ ದಿಶೆಯಲ್ಲಿ ಮತದಾರರು ಜಾಗೃತರಾಗಬೇಕೆಂದು ಡಾ. ಗೋಡಬೊಲೆ ಒತ್ತಾಯಿಸಿದ್ದಾರೆ.